ಬೆಂಗಳೂರು: ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಹಾಗೂ ಗೆಲುವಿನ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ಆರಂಭವಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಮುಖವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕರು ಬೆಳಗಾವಿ ವಿಭಾಗದ ನಾಯಕರ ಸಭೆಯನ್ನು ಮೊದಲು ನಡೆಸುತ್ತಿದ್ದಾರೆ. ಉಪಚುನಾವಣೆ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಕೂಡ ಉಪಸ್ಥಿತರಿದ್ದಾರೆ.‘
ಕೆಪಿಸಿಸಿಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಸಭೆ ಆರಂಭವಾಗಿದ್ದು ಸಭೆಯಲ್ಲಿ ಬೆಳಗಾವಿ ಭಾಗದ ಪ್ರಮುಖ ನಾಯಕರಾದ ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಳರ್, ಶಾಸಕಿ ಅಂಜಲಿ ನಿಂಬಾಳ್ಳರ್, ಮಹಾಂತೇಶ ಕೌಜಲಗಿ, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್ ಸದಸ್ಯರಾದ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಬೆಳಗಾವಿ, ಬೀದರ್ ಹಾಗೂ ರಾಯಚೂರು ಜಿಲ್ಲಾ ಮುಖಂಡರು ಭಾಗಿಯಾಗಿದ್ದಾರೆ.
ಯಾರು ಅಭ್ಯರ್ಥಿ ?
ಬೆಳಗಾವಿ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಇಲ್ಲವೇ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು, ಈ ಸಂಬಂಧ ಸುದೀರ್ಘ ಚರ್ಚೆ ನಡೆಯುತ್ತಿದೆ. ಇದಲ್ಲದೇ ಗೆಲುವಿಗೆ ಕಾರ್ಯತಂತ್ರ ಹೆಣೆಯುವ ಹಾಗೂ ಅಭ್ಯರ್ಥಿ ಪರ ಪಕ್ಷ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜಿಸುವ ಕಾರ್ಯ ಇಲ್ಲಿ ಆಗಲಿದೆ.
ಓದಿ...ಡೀಸೆಲ್ ಹಾಕಿಸಿದ್ದು ಕಾರು ಚಾಲಕ, ಕ್ರಮ ಮಾತ್ರ ನೌಕರನ ಮೇಲೆ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರೇ ಡಿಸಿಎಂ?
ಬೆಳಗಾವಿ ಭಾಗದ ನಾಯಕರ ಜೊತೆಗಿನ ಚರ್ಚೆಯ ನಂತರ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಚರ್ಚೆ ನಡೆಯಲಿದೆ. ಬಸವಕಲ್ಯಾಣದಿಂದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದಲ್ಲದೇ ಮೃತ ಶಾಸಕ ನಾರಾಯಣ ರಾವ್ ಪುತ್ರ ಗೌತಮ್, ಹಾಗೂ ವಿಧಾನಪರಿಷತ್ ಸದಸ್ಯ ವಿಜಯ್ ಸಿಂಗ್ ಪ್ರಮುಖ ಆಕಾಂಕ್ಷಿಗಳಾಗಿ ಪೈಪೋಟಿಯಲ್ಲಿ ಇದ್ದಾರೆ.
ಇನ್ನೂ ಮಸ್ಕಿ ಕ್ಷೇತ್ರದಿಂದ ಕಳೆದ ಸಾರಿ ಬಿಜೆಪಿ ಅಭ್ಯರ್ಥಿಯಾಗಿ ಸೋತು ಸದ್ಯ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿರುವ ಬಸವನಗೌಡ ತುರುವಿಹಾಳ ಎಂದು ಅಂತಿಮವಾಗಿ ಹಿನ್ನೆಲೆ ಈ ಸಂಬಂಧ ಹೆಚ್ಚಿನ ಚರ್ಚೆ ನಡೆಯುವುದಿಲ್ಲ.