ಬೆಂಗಳೂರು: ನಗರದ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿಫ್ಟ್ ಪಬ್ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕೇರಳಿಗರು ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿಳ್ಳೆ ಹೊಡೆಯುವ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದ್ದು, ಕುಡಿದ ಮತ್ತಿನಲ್ಲಿ ಬಿಯರ್ ಬಾಟಲ್ನಿಂದ ಹೊಡೆದು ಹಲ್ಲೆ ನಡೆಸಿದ್ದ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಕೇರಳ ಮೂಲದ ರಾಹುಲ್ ರಾಜು, ಯುವರಾಜ ಹಾಗೂ ಗಣೇಶ ಬಂಧಿತರಾಗಿದ್ದು, ಪ್ರಕರಣ ಕುರಿತಂತೆ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಯಲ್ಲಿ ಬೆಂಗಳೂರಿನ ಬೇಗೂರು ಸೂರ್ಯಕಾಂತ್ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಸೂರ್ಯಕಾಂತ್ ತನ್ನ ಸ್ನೇಹಿತನೊಂದಿಗೆ ಅಕ್ಟೋಬರ್ 20ರಂದು ಹೆಚ್ಎಸ್ಆರ್ ಲೇಔಟ್ನಲ್ಲಿರುವ ಪಬ್ಗೆ ಊಟಕ್ಕಾಗಿ ಬಂದಿದ್ದಾರೆ. ಇದೇ ವೇಳೆ ಆರೋಪಿಗಳು ಹುಟ್ಟುಹಬ್ಬದ ಆಚರಣೆ ಸಂಭ್ರಮದಲ್ಲಿದ್ದರು. ಆರೋಪಿಗಳೆಲ್ಲರೂ ಶೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಾಶ್ ರೂಮ್ನಲ್ಲಿ ಶಿಳ್ಳೆ ಹೊಡೆಯುತ್ತಿರುವುದನ್ನು ಕಂಡ ಸೂರ್ಯಕಾಂತ್ ಈ ಬಗ್ಗೆ ಪ್ರಶ್ನಿಸಿದ್ದಾರೆ.
ಇದೇ ಕಾರಣಕ್ಕೆ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ಹೋಗಿದೆ. ಬಿಯರ್ ಬಾಟಲ್ನಿಂದ ಹೊಡೆದು ಸೂರ್ಯಕಾಂತ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಸೂರ್ಯಕಾಂತ್ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ತಡರಾತ್ರಿ ಕಾರು ಪಲ್ಟಿಯಾಗಿ ದುರಂತ, ಸ್ಥಳದಲ್ಲೇ ನಾಲ್ವರ ದುರ್ಮರಣ