ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಕುರಿತ ಫಲಪುಷ್ಪ ಪ್ರದರ್ಶನಕ್ಕೆ ಎರಡನೇ ದಿನವಾದ ಶನಿವಾರ ಸಾವಿರಾರು ಜನ ಆಗಮಿಸಿ ಪುಷ್ಪಗಳಿಂದ ಕಂಗೊಳಿಸಿ ವಿಧಾನಸೌಧವನ್ನು ಕಣ್ತುಂಬಿಕೊಂಡರು. ವಾರಾಂತ್ಯವಾದ ಕಾರಣ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಬೆಳಗ್ಗೆ 10 ಗಂಟೆಯಿಂದಲೇ ಬರಲಾರಂಭಿಸಿದ್ದರು.
![thousands-of-people-visited-to-lalbagh-for-flower-show](https://etvbharatimages.akamaized.net/etvbharat/prod-images/05-08-2023/kn-bng-hc-01-7211320_05082023182557_0508f_1691240157_1024.jpg)
ಮಧ್ಯಾಹ್ನ 12 ಗಂಟೆಯ ಬಳಿಕ ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲಿ ಸಾವಿರಾರು ಜನ ಉದ್ಯಾನವನ ಪ್ರವೇಶಿಸುತ್ತಿದ್ದರು. ಇದರಿಂದ ಕೆಲ ಕಾಲ ಸುಡು ಬಿಸಿಲಿನಲ್ಲಿಯೂ ಸಾಲುಗಟ್ಟಿ ನಿಲ್ಲುವಂತಾಗಿತ್ತು. ಪ್ರದರ್ಶನದಲ್ಲಿ ಬಗೆ ಬಗೆಯ ಗುಲಾಬಿ ಹೂಗಳು, ಆಂಥೋರಿಯಂ ಹೂಗಳು, ಜರ್ಬೇರಾ, ಆರ್ಕಿಡ್, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್‌ಹಾಟ್ ಪೋಕರ್, ಆಲ್ಸ್ಟೋರೇಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧರಾಜ ಸೇರಿದಂತೆ ಶೀತ ವಲಯದ ಹೂಗಳು ಕಣ್ಮನ ಸೆಳೆಯುತ್ತಿವೆ. ನಾನಾ ಹೂವುಗಳ ಜೋಡಣೆಗಳ ಮುಂಭಾಗದಲ್ಲಿ ವೀಕ್ಷಣೆಗೆ ಬಂದಿದ್ದ ಜನತೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು.
![thousands-of-people-visited-to-lalbagh-for-flower-show](https://etvbharatimages.akamaized.net/etvbharat/prod-images/05-08-2023/kn-bng-hc-01-7211320_05082023182557_0508f_1691240157_409.jpg)
ಜನರ ನಿಯಂತ್ರಣಕ್ಕೆ ಹರಸಾಹಸ: ಲಾಲ್ಬಾಗ್ಗೆ ಆಗಮಿಸುವ ಜನತೆ ತಮ್ಮ ಮೊಬೈಲ್ಗಳಲ್ಲಿ ಫೋಟೋಗಳನ್ನು ತೆಗೆದುಕೊಳ್ಳುವುದಕ್ಕೆ ಮುಗಿ ಬಿಳುತ್ತಿದ್ದಾರೆ. ಈ ಜನರನ್ನು ನಿಯಂತ್ರಣ ಮಾಡುವುದಕ್ಕಾಗಿ ತೋಟಗಾರಿಕಾ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಜನ ದಟ್ಟಣೆ ನಿವಾರಣೆಗಾಗಿ ಹಲವು ಸಲಹೆಗಳನ್ನು ನೀಡಲಾಗುತ್ತಿತ್ತು. ಅಲ್ಲದೆ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಗಾಜಿನ ಮನೆಯಲ್ಲಿ ನಿಂತು ಪುಷ್ಪ ಪ್ರದರ್ಶನ ವೀಕ್ಷಿಸಿ ಬೇಗೆ ಹೊರಡುವಂತೆ ತಿಳಿಸುತ್ತಿದ್ದರು.
![thousands-of-people-visited-to-lalbagh-for-flower-show](https://etvbharatimages.akamaized.net/etvbharat/prod-images/05-08-2023/kn-bng-hc-01-7211320_05082023182557_0508f_1691240157_111.jpg)
ವಿಶೇಷ ಆಕರ್ಷಣೆಯಾಗಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ: ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಫಲಪುಷ್ಪ ಪ್ರದರ್ಶನ ಆಗಸ್ಟ್ 15 ರ ವರೆಗೆ ನಡೆಯಲಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ. 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ವಿಶೇಷ ಆಕರ್ಷಣೆಯಾಗಿದೆ. ಇನ್ನಳಿದು, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸುತ್ತಿವೆ.
![thousands-of-people-visited-to-lalbagh-for-flower-show](https://etvbharatimages.akamaized.net/etvbharat/prod-images/05-08-2023/kn-bng-hc-01-7211320_05082023182557_0508f_1691240157_298.jpg)
ರಸ್ತೆಗಳಲ್ಲಿ ವಾಹನ ದಟ್ಟಣೆ: ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗಾಗಿ ಡಾ.ಮರೀಗೌಡ ರಸ್ತೆಯ ಅಲ್ ಅಮೀನ್ ಕಾಲೇಜು ಅವರಣದಲ್ಲಿ ದ್ವಿಚಕ್ರ ವಾಹನಗಳಿಗೆ, ಕೆ.ಹೆಚ್ ರಸ್ತೆಯ ಶಾಂತಿನಗರ ಬಸ್ ನಿಲ್ದಾಣದ ಪಾರ್ಕಿಂಗ್ನಲ್ಲಿ ನಾಲ್ಕು ಚಕ್ರದ ವಾಹನಗಳು, ಮರಿಗೌಡ ರಸ್ತೆಯ ಹಾಪ್ ಕಾಮ್ಸ್ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸ್ಥಳಾವಕಾಶವನ್ನು ಮಾಡಿಕೊಡಲಾಗಿದೆ. ಆದರೆ, ಈ ಕುರಿತು ಮಾಹಿತಿ ಇಲ್ಲದೆ ವಾಹನ ಸವಾರರು ಲಾಲ್ಬಾಗ್ಗೆ ಆಗಮಿಸುತ್ತಿದ್ದು, ಉದ್ಯಾನವನದ ಸುತ್ತಮುತ್ತಲ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗಿದ್ದರಿಂದ ಸಾಮಾನ್ಯ ಜನ ಪರದಾಡುವಂತಾಗಿತ್ತು.
ಇದನ್ನೂ ಓದಿ: ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ರಾಜ್ಯಪಾಲರು : ವಿಡಿಯೋ