ಬೆಂಗಳೂರು: ಕೆರೆ ನೀರು ಕಲುಶಿತಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಮಹದೇವಪುರ ಕ್ಷೇತ್ರದ ಶೀಲವಂತನ ಕೆರೆಯಲ್ಲಿ ನಡೆದಿದೆ.
ಕೆರೆಗೆ ಕೊಳಚೆನೀರು ಸೇರುತ್ತಿರುವುದೇ ಮೀನುಗಳ ಮಾರಣ ಹೋಮಕ್ಕೆ ಮೂಲ ಕಾರಣವಾಗಿದೆ. ಬಹುಮಹಡಿ ಕಟ್ಟಡದ ಕೊಳಚೆ ನೀರು ಕೆರೆಗೆ ನೇರವಾಗಿ ಸೇರುತ್ತಿರುವುದು ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ 2.90 ಲಕ್ಷಕ್ಕೆ ಗುತ್ತಿಗೆ ಪಡೆದು ರೈತ ಮುನಿಕೃಷ್ಣಪ್ಪ ಅವರು ಮೀನು ಸಾಕಣೆ ಮಾಡುತ್ತಿದ್ದರು. ಇದೀಗ ಮೀನುಗಳ ಮಾರಣ ಹೋಮದಿಂದ ಅವರು ತತ್ತರಿಸಿದ್ದಾರೆ.
ವೈದೇಹಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಬಹುಮಹಡಿ ಕಟ್ಟಡಗಳ ಕೊಳಚೆ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದೇ ಈ ಘಟನೆಗೆ ಕಾರಣ ಎಂದು ಮುನಿಕೃಷ್ಣಪ್ಪ ಆರೋಪಿಸಿದ್ದಾರೆ. ಒಂದೆಡೆ ಕೆರೆಗಳಲ್ಲಿ ಮೀನುಗಳು ಸಾವನ್ನಪ್ಪಿರುವುದು ಕೆರೆಯನ್ನು ಅವಲಂಬಿಸಿರುವ ಪ್ರಾಣಿ ಸಂಕುಲಕ್ಕೂ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಕೆರೆಗೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಒಳಚರಂಡಿ ನೀರು ಹಾಗೂ ರಾಸಾಯನಿಕ ನೀರು ಶುದ್ಧೀಕರಣಗೊಳ್ಳದೇ ನೇರವಾಗಿ ಕೆರೆಗೆ ಸೇರಿದೆ. ಇದರಿಂದಾಗಿ ಕೆರೆಯ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಮೀನುಗಳು ಮೃತಪಟ್ಟಿವೆ. ಈ ಬಗ್ಗೆ ಬಿಬಿಎಂಪಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದವರು ತನಿಖೆ ನಡೆಸಬೇಕು. ಕಲುಷಿತ ನೀರನ್ನು ಹರಿಬಿಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಲ್ಲೂರುಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.