ಬೆಂಗಳೂರು : ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧವೂ ಕೊರೊನಾ ಭೀತಿಗೆ ನಲುಗಿದೆ. ವಿಧಾನಸಭೆ ಸಚಿವಾಲಯದ ಅಧಿಕಾರಿಗಳಿಗೆ ಇದೀಗ ಅಧಿವೇಶನ ನಡೆಸುವುದೇ ದೊಡ್ಡ ತಲೆನೋವಾಗಿದೆ. ಕೊರೊನಾ ಭೀತಿ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಧಿವೇಶನ ಬೇರೆಡೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ.
ಕೊರೊನಾ ಮಧ್ಯೆ ಸರ್ಕಾರಕ್ಕೆ ಅಧಿವೇಶನ ನಡೆಸುವ ಅನಿವಾರ್ಯತೆ ಬಂದೊದಗಿದೆ. ಸೆಪ್ಟೆಂಬರ್ನಲ್ಲಿ ಮಳೆಗಾಲದ ಅಧಿವೇಶನ ನಡೆಸಬೇಕಾಗಿದೆ. ಕೋವಿಡ್ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸುವುದು ಅಧಿಕಾರಿಗಳ ತಲೆನೋವಿಗೆ ಕಾರಣ.
ಬೇರೆಡೆ ಅಧಿವೇಶನ ನಡೆಸಲು ಚಿಂತನೆ : ವಿಧಾನಸೌಧದಲ್ಲಿ ಅಧಿವೇಶನ ನಡೆಸಿದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಸಾಧ್ಯ. ಅದರಲ್ಲೂ ವಿಧಾನಸಭೆ ಕಲಾಪ ನಡೆಸುವ ಸಭಾಂಗಣದಲ್ಲಿ ಜಾಗದ ಕೊರತೆ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ ಎಂಬುದು ಅಧಿಕಾರಿಗಳ ಆತಂಕ. ಹೀಗಾಗಿ ಬೃಹದಾಕಾರದ ಸಭಾಂಗಣ, ಆಡಿಟೋರಿಯಂನಲ್ಲಿ ಅಧಿವೇಶನ ನಡೆಸುವ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿಯೇ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ದೊಡ್ಡ ಆಡಿಟೋರಿಯಂ ಹುಡುಕಾಟದಲ್ಲಿ ತೊಡಗಿದ್ದಾರೆ. ಆ ಸಂಬಂಧ ಒಂದು ವರದಿಯನ್ನೂ ತಯಾರಿಸಿದ್ದಾರೆ.
ಕಲಾಪ ನಡೆಸುವ ಉದ್ದೇಶದಿಂದ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಅರಮನೆ ಮೈದಾನ, ಜಿಕೆವಿಕೆ ಆಡಿಟೋರಿಯಂ, ನ್ಯಾಯಾಂಗ ಬಡಾವಣೆಯಲ್ಲಿನ ಸಭಾಂಗಣವನ್ನು ಗುರುತಿಸಿದೆ. ಈ ವರದಿಯನ್ನು ಸ್ಪೀಕರ್ಗೆ ನೀಡಲಿದ್ದು, ಅಂತಿಮ ನಿರ್ಧಾರ ಅವರೇ ಕೈಗೊಳ್ಳಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ತಿಳಿಸಿದ್ದಾರೆ.
ಬ್ಯಾಂಕ್ವೆಟ್ ಹಾಲ್ನಲ್ಲಿ ಕಲಾಪದ ಪ್ರಸ್ತಾಪ : ಬೇರೆಡೆ ಕಲಾಪವನ್ನು ಶಿಫ್ಟ್ ಮಾಡಿದ್ರೆ, ಅಲ್ಲಿ ಕಲಾಪ ನಡೆಯಲು ಬೇಕಾದ ಎಲ್ಲ ಸೌಲಭ್ಯಗಳನ್ನು ನಿರ್ಮಿಸಬೇಕು. ಜೊತೆಗೆ ಕಡತಗಳನ್ನೂ ಸ್ಥಳಾಂತರಿಸಬೇಕಾಗುತ್ತದೆ. ಇದು ಸಾಕಷ್ಟು ದುಂದು ವೆಚ್ಚಕ್ಕೂ ಕಾರಣವಾಗುತ್ತದೆ ಎಂಬ ಆತಂಕ ಅಧಿಕಾರಿಗಳದ್ದಾಗಿದೆ.
ಹೀಗಾಗಿ, ವಿಧಾನಸೌಧದಲ್ಲಿನ ಬ್ಯಾಕ್ವೆಂಟ್ ಹಾಲ್ನಲ್ಲಿಯೇ ವಿಧಾನಸಭೆ ಕಲಾಪ ನಡೆಸುವ ಪ್ರಸ್ತಾಪವನ್ನು ಅಧಿಕಾರಿಗಳು ನೀಡಿದ್ದಾರೆ. ಬ್ಯಾಂಕ್ವೆಟ್ ಹಾಲ್ ಹಿರಿದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸಲು ಸುಲಭವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಎಲ್ಲ ಸಾಧ್ಯಾಸಾಧ್ಯತೆಗಳ ವರದಿ ಸಿದ್ಧಪಡಿಸಲಾಗಿದೆ. ಸ್ಪೀಕರ್ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೂಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.