ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಘೋಷಿಸಿದ್ದನ್ನು ನಾನು ಸ್ವಾಗತಿಸುವೆ. ಆದರೆ, ಉಪಚುನಾವಣೆಯ ದೃಷ್ಟಿಯಿಂದ ಈ ಘೋಷಣೆಗಳ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಹಿನ್ನೆಲೆ ರಾಜಕೀಯ ಲಾಭಕ್ಕಾಗಿ ಈ ಘೋಷಣೆ ಮಾಡಿದ್ದಾರೆ ಎಂಬ ಭಾವನೆ ಜನರಲ್ಲಿದೆ. ಅಷ್ಟೇ ಅಲ್ಲ, ಒಬಿಸಿ ಪಟ್ಟಿಯಲ್ಲೂ ವೀರಶೈವ ಲಿಂಗಾಯತ ಸೇರಿಸಬೇಕು. ಶೇ.16 ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಲಾಭಕ್ಕಾಗಿ ಈ ಪ್ರಯತ್ನ ನಡೆದಿದೆ. ನಿಗಮ ಮಾಡಿದರೆ ಸಾಲದು, ಹೆಚ್ಚಿನ ಅನುದಾನ ಇಡಬೇಕು. ನಾಲ್ಕೈದು ಸಾವಿರ ಕೋಟಿ ನೀಡಬೇಕು. ನಾಲ್ಕೈದು ನೂರು ಕೋಟಿ ಇಟ್ಟರೆ ಏನೇನೂ ಸಾಲದು. ಯಾಕೆಂದರೆ, ಸಮುದಾಯ ದೊಡ್ಡದಿದೆ. ಮೂಗಿಗೆ ತುಪ್ಪ ಸವರಿದರೆ ಸಾಲದು. ಇದನ್ನ ಯಾರೂ ಒಪ್ಪುವುದಿಲ್ಲ ಎಂದರು.
ಬಿಎಸ್ವೈ ನಂತರ ಲಿಂಗಾಯತ ನಾಯಕ ಯಾರು ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಒಂದು ಸಮುದಾಯವನ್ನ ಗುರಿಯಿಟ್ಟು ಹೋದರೆ ಆಗಲ್ಲ. ಎಲ್ಲಾ ಸಮುದಾಯಗಳನ್ನ ಜೊತೆಗೆ ಕೊಂಡೊಯ್ಯಬೇಕು. ಹಾಗಾದಾಗ ಮಾತ್ರ ನಾಯಕನಾಗೋಕೆ ಸಾಧ್ಯ ಎಂದು ಹೇಳಿದರು.