ಬೆಂಗಳೂರು: ಡಿಕೆಶಿಯವರನ್ನ ನಾನು ಭೇಟಿ ಮಾಡಿದ್ದೇನೆ. 15 ಅಡಿಗಳ ದೂರದಿಂದ ಅವರನ್ನ ಕಂಡಿದ್ದೇನೆ. ನನ್ನನ್ನು ನೋಡಿ ವಿಶ್ ಮಾಡಿದ್ರು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ದೆಹಲಿಯ ರಾಮ್ ಮನೋಹರ್ ಆಸ್ಪತ್ರೆಯಲ್ಲಿ ಡಿಕೆಶಿಗೆ ತಪಾಸಣೆ ನಡೆಯುತ್ತಿದ್ದ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ ರಾಮಲಿಂಗಾ ರೆಡ್ಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಡಿಕೆಶಿ ಆರೋಗ್ಯದ ಬಗ್ಗೆ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ವೈದ್ಯರು ಜನರಲ್ ಚೆಕ್ ಅಪ್ ಮಾಡ್ತಿದ್ದಾರೆ ಎಂದರು.
ರಾಜಕೀಯ ಪ್ರೇರಿತವಾಗಿ ಡಿಕೆಶಿಯವರನ್ನು ಬಂಧಿಸಲಾಗಿದೆ. ಇದನ್ನು ಕೇಂದ್ರ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಬಂಧನ ಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದ ಅವರು, ವಿಪಕ್ಷಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ? ಐಟಿ, ಇಡಿಯವರು ಅವರ ಕೆಲಸ ಮಾಡಲಿ. ಆದರೆ, ಬೇರೆಯವರ ಕೈಗೊಂಬೆಯಾಗಿ ಕೆಲಸ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಕಳೆದ 5 ದಿನಗಳಿಂದ ಹಬ್ಬ ಹರಿದಿನಗಳಲ್ಲೂ ಮತ್ತು ಧಾರ್ಮಿಕ ವಿಧಿ ವಿಧಾನಗಳಿಗೆ ಅವಕಾಶ ನೀಡದ ಇಡಿ ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತಿದ್ದ ಡಿಕೆ. ಶಿವಕುಮಾರ್ ಅವರನ್ನೂ ಬಂಧಿಸುವ ನಿರ್ಣಯ ಅತ್ಯಂತ ಖಂಡನೀಯ. ದ್ವೇಷ ರಾಜಕಾರಣ ವಿಚಾರಣಾ ಸಂಸ್ಥೆಗಳಲ್ಲೂ ರಾಜಕೀಯ ಹಸ್ತಕ್ಷೇಪ ಸಲ್ಲದು. ಕಾನೂನು ಪ್ರಕ್ರಿಯೆಗಳಲ್ಲಿ ರಾಜಕೀಯ ಪ್ರವೇಶಿಸಬಾರದು. ಇಂತಹದ್ದನ್ನು ಜನ ಸಹಿಸುವುದಿಲ್ಲ. ಭಯ ಹುಟ್ಟಿಸುವ ಪ್ರಯತ್ನಗಳು ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.