ಬೆಂಗಳೂರು: ಇದು ದೇವರು ಕೊಟ್ಟ ಸರ್ಕಾರ. ದೇವರು ಎಷ್ಟು ದಿನ ಆಶೀರ್ವಾದ ಕೊಡುತ್ತಾರೋ ಅಲ್ಲಿವರೆಗೂ ಅಧಿಕಾರ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ಪದ್ಮನಾಭನಗರದಲ್ಲಿ ದೇವೇಗೌಡರ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿ, ದೇವೇಗೌಡರು, ಕುಮಾರಸ್ವಾಮಿ ನಿರ್ಧಾರವೇ ನಮ್ಮ ನಿರ್ಧಾರ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ನಾನು ಡಿಸಿಎಂ ಆಗೋ ಬಗ್ಗೆ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಖರ್ಗೆ ಸಿಎಂ ಆಗೋ ವಿಚಾರ ದೇವೇಗೌಡರು ಚರ್ಚೆ ಮಾಡಿಲ್ಲ. ಡಿಕೆಶಿ ಬಳಿ ಈ ವಿಚಾರ ಚರ್ಚೆ ಆಗಿಯೇ ಇಲ್ಲ. ಸುಳ್ಳು ಸುದ್ದಿ ಹರಡಿಸಬಾರದು. ಸಿದ್ದರಾಮಯ್ಯ, ಖರ್ಗೆ ಬಗ್ಗೆ ಯಾವುದೇ ಚರ್ಚೆ ದೇವೇಗೌಡರ ಸಭೆಯಲ್ಲಿ ಆಗಿಲ್ಲ. ಸರ್ಕಾರ ಉಳಿಸಿಕೊಳ್ಳಿ ಅಂತ ಮಾತ್ರ ದೇವೇಗೌಡರು ಹೇಳಿದ್ದಾರೆ ಎಂದು ವಿವರಿಸಿದರು.
ನಮ್ಮ ಶಾಸಕರ ಮನವೊಲಿಸುತ್ತೇವೆ:
ನಮ್ಮ ಶಾಸಕರ ಮನವೊಲಿಸುತ್ತೇವೆ. ಕಾಂಗ್ರೆಸ್ ಅವರ ಶಾಸಕರ ಮನವೊಲಿಸಲಿ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ನಮ್ಮ ತಾಯಿ ಯಾರ ಮನೆಗೂ ಹೋಗಿ ಮನವೊಲಿಸುವ ಕೆಲಸ ಮಾಡಿಲ್ಲ. ಇದು ಕೇವಲ ಮಾಧ್ಯಮ ಸೃಷ್ಟಿ ಅಷ್ಟೇ ಎಂದು ತಿಳಿಸಿದರು.
ದೇವೇಗೌಡರ ಕುಟುಂಬದ ಹೆಣ್ಣು ಮಕ್ಕಳು ಕಿರುಕುಳ ನೀಡುತ್ತಿದ್ದಾರೆ ಅನ್ನೋ ಶಾಸಕ ನಾರಾಯಣಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅಂತಹ ವಿಚಾರ ಇದ್ದರೆ ನಮ್ಮ ಬಳಿ ಬಂದು ಚರ್ಚೆ ಮಾಡಬಹುದಿತ್ತು. ನಾವೆಲ್ಲ ಒಟ್ಟಾಗಿ ಇದ್ದೇವೆ. ದೇವೇಗೌಡರು ಎಲ್ಲಾ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಶಾಸಕರ ಸಭೆಯಲ್ಲಿ ಮುಂದಿನ ನಿರ್ಧಾರ:
ಶಾಸಕರ ಸಭೆಯಲ್ಲಿ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ತಿಳಿಸಿರುವುದಾಗಿ ಮಾಹಿತಿ ನೀಡಿದರು. ಈಗಿನ ವಿದ್ಯಮಾನಗಳ ಬಗ್ಗೆ ಚರ್ಚೆ ಆಗಿದೆ. ನಮ್ಮ ಶಾಸಕರ ಮನವೊಲಿಸುವ ಕೆಲಸ ಮಾಡುತ್ತೇವೆ. ಸರ್ಕಾರ ಉಳಿಸಕೊಳ್ಳಬೇಕು ಅನ್ನೋದು ಎಲ್ಲರ ಅಭಿಪ್ರಾಯ. ನಮ್ಮ ಪಕ್ಷದ ಶಾಸಕರ ಸಭೆ ಕರೆದಿದ್ದಾರೆ. ಅಲ್ಲಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.