ದೇವನಹಳ್ಳಿ : ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಿಂಗಾಪುರದಿಂದ ಬಂದ ಮೂರನೇ ವಿಶೇಷ ವಿಮಾನ ಬುಧವಾರ ರಾತ್ರಿ 10 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ಏರ್ ಇಂಡಿಯಾ ವಿಮಾನದಲ್ಲಿ 25 ಜನ ಗರ್ಭಿಣಿಯರು ಸೇರಿದಂತೆ ಒಟ್ಟು 152 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಸ್ಕ್ರೀನಿಂಗ್ ಮಾಡಲಾಗಿದ್ದು, ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಇವರನ್ನು 10 ಬಸ್ಗಳಲ್ಲಿ ನಿಗದಿತ ಹೋಟೆಲ್ಗಳಿಗೆ ಕಳುಹಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿಪಿ ರವೀಂದ್ರ ತಿಳಿಸಿದ್ದಾರೆ.
ಕೆಐಎಎಲ್ಗೆ ಮೊದಲ ವಿಮಾನದಲ್ಲಿ ಬಂದಿದ್ದವರನ್ನು ಏರ್ಪೋರ್ಟ್ನಲ್ಲೇ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ, ಬಳಿಕ ನಡೆಸಿದ ಪರೀಕ್ಷೆಯಲ್ಲಿ ಒಬ್ಬ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆತನ ಜೊತೆ ಬಂದಿದ್ದ ಎಲ್ಲಾ ಪ್ರಯಾಣಿಕರು ಈಗಾಗಲೇ ಕ್ವಾರಂಟೈನ್ನಲ್ಲಿದ್ದಾರೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರ ಪತ್ತೆ ಕಾರ್ಯ ನಡೆಯುತ್ತಿದೆ. ಆದ್ದರಿಂದ 3ನೇ ವಿಮಾನದಲ್ಲಿ ಬಂದವರ ಬಗ್ಗೆ ತೀವ್ರ ನಿಗಾವಹಿಸಲಾಗಿದೆ ಎಂದು ಡಿಸಿಪಿ ತಿಳಿಸಿದರು.