ಬೆಂಗಳೂರು: ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಂಡು ಶಾಲೆಗಳ ಆರಂಭಕ್ಕೆ ಮುಂದಾಗಬಾರದು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸಲಹೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆತುರಕ್ಕೆ ಬಿದ್ದು ‘ಭವಿಷ್ಯ’ದ ಜೊತೆ ಆಟವಾಡಬೇಡಿ. ರಾಜ್ಯದಲ್ಲಿ ಶಾಲೆಗಳನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲು ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಬೇರೆ ಬೇರೆ ರಾಜ್ಯಗಳ ಸ್ಥಿತಿಗತಿ ಬಗ್ಗೆ ಅವಲೋಕಿಸಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಾಲೆಗಳ ಪುನಾರಂಭದ ಕುರಿತು ರಾಜ್ಯ ಸರ್ಕಾರ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಮಕ್ಕಳ ತಜ್ಞರು, ಪೋಷಕರ ಸಲಹೆ ಪಡೆದು, ಶಾಲೆಗಳ ಪುನಾರಂಭದ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಆತುರಕ್ಕೆ ಬಿದ್ದು ನಿರ್ಧಾರ ತೆಗೆದುಕೊಂಡರೆ ಮಕ್ಕಳ ಪ್ರಾಣಕ್ಕೇ ಆಪತ್ತು. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸುರೇಶ್ ಕುಮಾರ್ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.