ಬೆಂಗಳೂರು: ಮಹಿಳೆಯ ಗಮನ ಬೇರೆಡೆ ಸೆಳೆದು1.35 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಇಬ್ಬರು ಆರೋಪಿಗಳ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೊಳಗಾದ ಅಕ್ಕಿಪೇಟೆ ನಿವಾಸಿ ಮಮತಾ ಎಂಬುವರು ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 420 ವಂಚನೆ ಹಾಗೂ 379 ಸೆಕ್ಷನ್ ಪ್ರಕಾರ ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜ.29 ರಂದು ಅಕ್ಕಿಪೇಟೆಯಲ್ಲಿ ಹಣ್ಣಿನ ಅಂಗಡಿ ಹೋಗುತ್ತಿದ್ದ ಮಮತಾ ಎಂಬುವರಿಗೆ ಈ ಕಳ್ಳರು ಮೋಸ ಮಾಡಿದ್ದರು.
ಏನಿದು ಘಟನೆ:
ಅಂಗವಿಕಲನೊಬ್ಬ ತಾನು ಬಿಹಾರದ ಮೂಲದವನಾಗಿದ್ದು, ಊರಿಗೆ ಹೋಗಲು ಹಣವಿಲ್ಲ, ತನಗೆ ಯಾರೂ ಸಂಬಂಧಿಕರಿಲ್ಲ ಎಂದು ಸಹಾಯ ಮಾಡುವಂತೆ ಆಳುತ್ತಾ ಗೋಗರೆದಿದ್ದಾನೆ. ಇದಕ್ಕೆ ಸ್ಪಂದಿಸಿದ ಮಹಿಳೆ, ಸಹಾಯ ಮಾಡಲು ಮುಂದಾಗಿದ್ದಾರೆ. ಇದಾದ ನಂತರ ಎರಡನೇ ಅಪರಿಚಿತ ವ್ಯಕ್ತಿ ಬಂದು ಅಂಗವಿಕಲ ವ್ಯಕ್ತಿ ಕಳ್ಳನಾಗಿದ್ದಾನೆ. ಆತ ಎಲ್ಲರಿಗೂ ಮೋಸ ಮಾಡಿದ್ದಾನೆ. ಇದನ್ನೆಲ್ಲ ನಂಬಿ ನೀವೂ ಮೋಸ ಹೋಗದಿರಿ ಎಂದು ಮಹಿಳೆಗೆ ಕಿವಿ ಮಾತು ಹೇಳಿದ್ದಾನೆ.
ಜೊತೆಗಿರುವ ವ್ಯಕ್ತಿ ಸರಿಯಿಲ್ಲ. ನಿಮ್ಮ ಬಳಿಯಿರುವ ಚಿನ್ನ ಸುರಕ್ಷಿತವಲ್ಲ. ಚಿನ್ನವನ್ನ ಬಿಚ್ಚಿಕೊಡಿ ಎಂದಿದ್ದಾನೆ. ಆರೋಪಿ ಸೂಚನೆ ಮೇರೆಗೆ 40 ಗ್ರಾಂ ಚಿನ್ನದ ಸರ ಹಾಗೂ 5 ಗ್ರಾಂ ಉಂಗುರ ಬಿಚ್ಚಿ ಕೊಟ್ಟ ಮಹಿಳೆಗೆ ಈ ಇಬ್ಬರು ಪಂಗನಾಮ ಹಾಕಿದ್ದಾರೆ.