ಬೆಂಗಳೂರು : ಎರಡು ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಕಳ್ಳ ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ. ಮೆಡಿಕಲ್ ಶಾಪ್ಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಶೋಕ್ (35) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಆಶೋಕ್ ನ.13ರಂದು ಮುಂಜಾನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಮೂರು ಅಂಗಡಿಗಳ ಬಾಗಿಲನ್ನು ಮುರಿದಿದ್ದಾನೆ. ಈ ಪೈಕಿ ಮೆಡಿಕಲ್ ಶಾಪ್ ಬೀಗ ಮುರಿದು ಒಳನುಗ್ಗಿದ್ದ ಕಳ್ಳನನ್ನು ಸ್ಥಳೀಯರು ಅಲ್ಲೇ ಬೀಗ ಹಾಕಿದ್ದಾರೆ. ಈ ವೇಳೆ ಸಿಕ್ಕಿಬೀಳುವ ಭಯದಲ್ಲಿ ಮೆಡಿಕಲ್ ಸ್ಟೋರ್ ನಲ್ಲಿದ್ದ ಮಾತ್ರೆಗಳನ್ನು ನುಂಗಿ ಸಾಯುವ ಬೆದರಿಕೆ ಹಾಕಿದ್ದಾನೆ.
ಅಷ್ಟರಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಯಶವಂತಪುರ ಪೊಲೀಸರು ಆರೋಪಿಗೆ ಚಿಕಿತ್ಸೆ ಕೊಡಿಸಿ ಜೈಲಿಗಟ್ಟಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈತನ ಬಂಧನದಿಂದ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ : ರಾತ್ರಿ ಕಳ್ಳತನ ಮಾಡಿ ಮುಂಜಾನೆ ಡ್ಯೂಟಿಗೆ ಹಾಜರ್ ಆದ ಸಿಬ್ಬಂದಿ..