ಬೆಂಗಳೂರು : ನಮ್ಮ ಆರೋಗ್ಯದ ಬಗ್ಗೆ ಸಚಿವ ಸೋಮಣ್ಣ ಅವರಿಗೆ ಕಾಳಜಿ ಬೇಡ. ಆರೋಗ್ಯ ಯಾವ ರೀತಿ ಇಟ್ಟುಕೊಳ್ಳಬೇಕೆಂದು ವೈದ್ಯರು ಹೇಳಿದ್ದಾರೆ. ಯೋಗ್ಯತೆ ಇದ್ದರೆ ಬೆಂಗಳೂರು ನಗರ ಆರೋಗ್ಯ ಸರಿಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ಸೋಮಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ರಿಂಗ್ ರೋಡ್ ಜಂಕ್ಷನ್, ಥಣಿಸಂದ್ರ ಮತ್ತಿತರ ಕಡೆ ಇಂದು ಮಳೆ ಹಾನಿ ವೀಕ್ಷಣೆ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ನಗರ ಏನು ಅಂತಾ ಸೋಮಣ್ಣ ಅವರಿಂದ ಕಲಿಯಬೇಕಿಲ್ಲ ಎಂದು ಹೇಳಿದರು.
ಜೆಡಿಎಸ್ನಲ್ಲಿ ಯಾವ ರೀತಿ ಬೆಳೆದ್ರಿ, ದೇವೇಗೌಡರ ಹೆಸರಲ್ಲಿ ಯಾವ ರೀತಿ ಬೆಳಿದ್ರಿ ಎಲ್ಲಾ ಗೊತ್ತಿದೆ. ಬಿಡುವಿದ್ದರೆ ಬರುವುದಕ್ಕೆ ಹೇಳಿ ಪಾಠ ಮಾಡುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿಕೆಗೆ ಗುಡುಗಿದರು. ರಾಜಕಾಲುವೆ, ರಸ್ತೆ ಕೆಲಸ ಮಾಡದೆ ಕೋಟ್ಯಂತರ ಲೂಟಿ ಮಾಡಿದಿರಿ. ನಾನು 1973ರಿಂದ ಬೆಂಗಳೂರಿನಲ್ಲೇ ಬದುಕಿ ಕೆಲಸ ಮಾಡಿದ್ದೇನೆ. ಮತ ಕೊಟ್ಟ ಜನರಿಗೆ ಮೋಸ ಮಾಡಿಲ್ಲ. ಅಧಿಕಾರಿಗಳಿಗೆ ಹಿಂದಿನಿಂದ ನೀರು ನಿಲ್ಲಿಸಲು ಹೇಳಿ ಮುಂದೆ ಬೈಯುವ ಕೆಲಸ ಮಾಡಿಲ್ಲ ಎಂದು ಟಾಂಗ್ ನೀಡಿದರು.
ಸಚಿವ ಆರ್. ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಯಾವ ಟೀ ಮಾರುವವರಿಗೆ ಕೊಡುತ್ತಾರೆ. ಒಂದು ಕುಟುಂಬದಿಂದ ಎಷ್ಟು ಜನ ಬಂದಿದ್ದಾರೆ. ನಾನು ಲೂಟಿ ಮಾಡಿಲ್ಲ. ಹಲೋ ಕಂದಾಯ ಸಚಿವರು ಅಂತೆ, ನಮ್ಮ ಕುಟುಂಬದ ಬಗ್ಗೆ ಚರ್ಚೆ ಮಾಡ್ತೀರಲ್ಲಾ. ಕನ್ನಡಿಗರ ಸ್ವಾಭಿಮಾನ, ಪ್ರಾದೇಶಿಕ ಪಕ್ಷ ಉಳಿಸಬೇಕು, ಟೀ ಮಾರುವವರು ನಮ್ಮಲ್ಲಿ ಇಲ್ಲದೇ ಇರಬಹುದು. ಆದರೆ, ಜನರ ಕಷ್ಟ ಅರಿಯುವವರನ್ನು ಆಯ್ಕೆ ಮಾಡುತ್ತೇವೆ. ಟೀ ಮಾರುವವರ ಹೆಸರಿನಲ್ಲಿ ಲೂಟಿ ಮಾಡುವವರನ್ನು ಆಯ್ಕೆ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಮಾಗಡಿ ಕ್ಷೇತ್ರದ ಗುದ್ದಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವಾಗಿ ಕ್ಷೇತ್ರಗಳಲ್ಲಿ ಯಾರನ್ನು ಯಾರು ಹೊಗಳಿರುತ್ತಾರೋ ಗೊತ್ತಿಲ್ಲ. ಮಾಗಡಿ ಕ್ಷೇತ್ರ ವಿಚಾರದಲ್ಲಿ ನನ್ನ ಬಳಿ ಚರ್ಚೆ ಆಗಿಲ್ಲ. ಯಾವ ದೃಷ್ಟಿಯಿಂದ ಬಾಲಕೃಷ್ಣ ಅವರು ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಆಗ ನನ್ನ ಆತ್ಮೀಯ ಸ್ನೇಹಿತರು. ಆದರೆ, ಅವರ ನಿರ್ಧಾರದಿಂದ ಹೋಗಿದ್ದಾರೆ. ಯಾರು ಅವರ ಆತ್ಮೀಯರು ನನ್ನ ಬಳಿ ಮಾತಾಡಲ್ಲ. ಶಾಸಕರ ಸ್ಥಾನ ಖಾಲಿ ಇಲ್ಲ ಏನಂತ ಚರ್ಚೆ ಮಾಡಲಿ ಎಂದರು.
ಫೋಟೋ ಶೂಟ್ಗೆ ಬಂದು ಹೋಗುವುದು ಬೇಡ, ಪರಿಹಾರ ಕೊಡಿ: ಫೋಟೋ ಶೂಟ್ಗೆ ಬಂದು ಹೋಗುವುದು ಬೇಡ, ಮಳೆ ಹಾನಿ ಪ್ರದೇಶಗಳಲ್ಲಿ ಪರಿಹಾರ ಕೊಡುವುದಕ್ಕೆ ಈವರೆಗೆ ಮಾಹಿತಿನೇ ತೆಗೆದುಕೊಂಡಿಲ್ಲ. ಬೆಂಗಳೂರಲ್ಲಿ ಏಳು ಜನರು ಮಂತ್ರಿ ಇದ್ದರೂ ಏನು ಪ್ರಯೋಜನ ಹೇಳಿ, ಸರ್ಕಾರ ಹಾಗೂ ಕಾರ್ಪೊರೇಷನ್ನಲ್ಲಿ ಹಣದ ಕೊರತೆ ಇಲ್ಲ. ಆದರೆ, ಹಣ ಲೂಟಿಯಾಗುತ್ತಿದೆ ಅಷ್ಟೇ ಎಂದು ಆರೋಪಿಸಿದರು.
ಕಾಮಗಾರಿ ನೋಡಿದರೆ ಅದು ಗುಣಾತ್ಮಕವಾಗಿ ಆಗಿಲ್ಲ ಅನ್ನಿಸುತ್ತದೆ. ರಾಜಕಾರಣದಲ್ಲಿ ಶ್ರೀಮಂತಿಕೆ ಇರುವವರು ಇದ್ದಾರೆ. ಆ ರಾಜಕಾರಣಿಯಿಂದ ಜನರು ಸಮಸ್ಯೆ ಎದುರಿಸುತ್ತಾರೆ ಎಂದು ದೂರು ಬಂದಿವೆ. ಪ್ರಮುಖ ರಾಜಕಾರಣಿ ಈ ಜಾಗದಲ್ಲಿ ಕಾಂಪೌಂಡ್ ಹಾಕಿದ್ದೇ ಇದಕ್ಕೆ ಕಾರಣ. ಜನರು ಸಾಲ ಮಾಡಿ ಇಲ್ಲಿ ಫ್ಲ್ಯಾಟ್ ಖರೀದಿಸಿ ವಾಸ ಮಾಡ್ತಿದ್ದಾರೆ. ಅಧಿಕಾರಿಗಳು ಅನುಮತಿ ಕೊಡುವ ಮೊದಲೇ ಯೋಚನೆ ಮಾಡಬೇಕಿತ್ತು. ಹವಾಮಾನ ಇಲಾಖೆ ಮಳೆ ಜೋರಾಗಿ ಬರುತ್ತದೆ ಅಂದಾಗ ಅಧಿಕಾರಿಗಳು ಮಳೆ ಬರಲ್ಲ ಎಂದು ನಿರ್ಲಕ್ಷ್ಯ ಮಾಡಿದರು. ಯಾವೆಲ್ಲಾ ಭಾಗದಲ್ಲಿ ನೀರು ನಿಲ್ಲುವ ಸ್ಥಳ ಗುರುತಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.