ಬೆಂಗಳೂರು: ಸೂಕ್ಷ್ಮ ಪ್ರಕರಣಗಳಿಗೆ ಸಂಬಂಧಿಸಿದ ‘ಪ್ರಥಮ ವರ್ತಮಾನ ವರದಿ’ಯನ್ನು (ಎಫ್‌ಐಆರ್) ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ವಿಳಂಬವಾಗುತ್ತಿದೆ ಎಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.
ಎಫ್‌ಐಆರ್ ದಾಖಲಾದ 24 ಗಂಟೆಯಲ್ಲಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಲೋಕಾಯುಕ್ತ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಎಸ್. ಉಮಾಪತಿ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ ವರಾಲೆ ನೇತೃತ್ವದ ವಿಭಾಗೀಯ ಪೀಠಕ್ಕೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಕೆ ಪಿ ಅಂಜಲಿ ಅವರು ಪ್ರಮಾಣಪತ್ರದ ಮೂಲಕ ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ದಾಳಿ ನಡೆಸುವ ಕೆಲವು ಸೂಕ್ಷ್ಮ ಪ್ರಕರಣದಲ್ಲಿ ಎಫ್‌ಐಆರ್ ಅನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದರೆ, ಅದರ ಮಾಹಿತಿ ಆರೋಪಿಗೆ ಸಿಗುವ ಮತ್ತು ಅದರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಧ್ಯೇಯೋದ್ದೇಶವನ್ನೇ ವಿಫಲಗೊಳಿಸುತ್ತದೆ.
ಇದರಿಂದ ಸಮಾಜ ಮತ್ತು ಆರೋಪಿಗಳ ಹಕ್ಕುಗಳ ವಿಚಾರದಲ್ಲಿ ಸಮತೋಲನಾ ಕಾಯ್ದುಕೊಳ್ಳುವ ದೃಷ್ಟಿಯಿಂದ ಸೂಕ್ಷ್ಮ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್ ಅನ್ನು ವಿಳಂಬವಾಗಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಈ ವರ್ಗಕ್ಕೆ ಸೇರದ ಇತರೆ ಪ್ರಕರಣಗಳ ಎಫ್‌ಐಆರ್ ಅನ್ನು ಸುಪ್ರೀಂಕೋರ್ಟ್ ಆದೇಶದಂತೆ ದಾಖಲಿಸಿದ 24 ಗಂಟೆಯೊಳಗೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಲೋಕಾಯುಕ್ತರು ಸಹ ಕೆಲವೊಂದು ಪ್ರಕರಣಗಳಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಲೋಕಾಯುಕ್ತರು ಪ್ರಮಾಣ ಸಲ್ಲಿಸುವುದರಿಂದ ಅರ್ಜಿಯಲ್ಲಿ ಎತ್ತಲಾಗಿರುವ ಅಂಶಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂಬುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಹಾಗೆಯೇ, ಅರ್ಜಿಯಲ್ಲಿ ಎತ್ತಲಾಗಿರುವ ಆಕ್ಷೇಪಗಳಿಗೆ ಪರಿಹಾರವೂ ದೊರೆತಿದೆ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು 2016ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದನ್ನು ಸಿಬಿಐ ಸೇರಿದಂತೆ ಉಳಿದ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. ಸುಪ್ರೀಂಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ 2018ರಲ್ಲಿ ಎಸಿಬಿ ಮತ್ತು ಬಿಎಂಟಿಎಫ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅದನ್ನು ಎಸಿಬಿ ಪಾಲಿಸುತ್ತಾ ಬಂದಿತ್ತು. ಈ ಮಧ್ಯೆ ಎಸಿಬಿಯನ್ನು ರದ್ದುಗೊಳಿಸಿ 2022ರ ಆ. 11ರಂದು ತೀರ್ಪು ನೀಡಿದ ಹೈಕೋರ್ಟ್, ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸಿ ಆದೇಶಿಸಿದೆ. ಆದರೆ, ಲೋಕಾಯುಕ್ತ ಪೊಲೀಸರು, ಎಫ್‌ಐಆರ್‌ಗಳನ್ನು ದಾಖಲಿಸಿದ 24 ಗಂಟೆಗಳಲ್ಲಿ ವೆಬ್‌ಸೈಟ್‌ಗೆ ಹಾಕುತ್ತಿಲ್ಲ. ಇದರಿಂದ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲು ದೂರುದಾರರು, ಕಕ್ಷಿದಾರರು ಮತ್ತು ವಕೀಲರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
ಓದಿ: ಅಕ್ರಮ ಧಾರ್ಮಿಕ ಕೇಂದ್ರಗಳ ಕುರಿತು ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್