ಬೆಂಗಳೂರು: ಕನ್ನಡ ನಾಡಿನಲ್ಲಿ ಕನ್ನಡ ಇರಬೇಕು, ಅನ್ಯ ಭಾಷೆಗೆ ವಿರೋಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆದ್ರೆ ಆದರೆ ಕಾನೂನು ಕೈಗೆತ್ತಿಕೊಂಡು ಆಸ್ತಿ ಪಾಸ್ತಿ ಹಾನಿ ಮಾಡೋದು ಸಹಿಸಲ್ಲ ಎಂದು ಡಿಸಿಎಂ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಲ್ಲಿ ಕರವೇ ಪ್ರತಿಭಟನೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಪ್ರತಿಭಟನೆಗೆ ನಮ್ಮ ಅಭ್ಯಂತರವಿಲ್ಲ. ಯಾರದ್ದೇ ಆಗಿರಲಿ ನ್ಯಾಯಯುತವಾದ ಪ್ರತಿಭಟನೆಗೆ ನಮ್ಮ ವಿರೋಧವಿಲ್ಲ. ಕಾನೂನು ಯಾರು ಕೈಗೆತ್ತಿಗೊಳ್ಳುತ್ತಾರೋ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇವತ್ತು ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದರು. ಕನ್ನಡದಲ್ಲಿ ಬೋರ್ಡ್ ಹಾಕುವ ವಿಚಾರವಾಗಿ ನಿಯಮ ಇರಲಿಲ್ಲ. ಆ ನಿಯಮ ಮಾಡಬೇಕು ಅಂತಿದ್ದೇವೆ. ಕನ್ನಡದಲ್ಲಿ ಬೋರ್ಡ್ ಹಾಕಲೇಬೇಕು ಎಂದು ತಾಕೀತು ಮಾಡಿದರು.
ಯತ್ನಾಳ್ ಹಗರಣದ ದಾಖಲೆಗಳನ್ನು ಆಯೋಗದ ಮುಂದಿರಿಸಲಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ಉದ್ದೇಶವಿದ್ದರೆ ಶಾಸಕ ಯತ್ನಾಳ್ ಅವರು ಬಿಜೆಪಿ ಅವಧಿಯಲ್ಲಿ ನಡೆದಿರುವ ಕೊರೊನಾ ಹಗರಣದ ಬಗ್ಗೆ ದಾಖಲಾತಿಗಳನ್ನು ವಿಚಾರಣಾ ಆಯೋಗದ ಮುಂದಿರಿಸಲಿ ಎಂದು ಸಿಎಂ ತಿಳಿಸಿದರು.
ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ: ಕರ್ನಾಟಕ ರಕ್ಷಣಾ ವೇದಿಕೆ ಹೋರಾಟದ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಬೋರ್ಡ್ ಅಳವಡಿಕೆ ಕುರಿತಾಗಿ ಮಹತ್ವದ ತೀರ್ಮಾನ ಕೈಗೊಳ್ಳುವ ಕುರಿತು ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂಗಡಿ ಮುಗ್ಗಟ್ಟುಗಳ ಮುಂಭಾಗ ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗೃಹ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.
ಆಸ್ತಿಪಾಸ್ತಿ ಹಾನಿ ಆದ್ರೆ ಸಹಿಸಲ್ಲ ಎಂದ ಡಿಕೆಶಿ: ನಾವೆಲ್ಲರೂ ಕನ್ನಡ ಉಳಿಸಬೇಕು. ಕನ್ನಡಪರ ಹೋರಾಟಗಾರರ ಮೇಲೆ ನಮಗೆ ಗೌರವವಿದೆ. ಹಾಗಂತ ಆಸ್ತಿಪಾಸ್ತಿ ಹಾನಿ ಮಾಡಿದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಸದಾಶಿವನಗರ ನಿವಾಸ ಬಳಿ ಮಾತನಾಡಿದ ಅವರು, ಕನ್ನಡ ನಾಮಫಲಕ ಕುರಿತ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕನ್ನಡ ಉಳಿಸಿ, ಬೆಳೆಸುವ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ. ಹೋರಾಟದ ಹೆಸರಿನಲ್ಲಿ ಆಸ್ತಿಪಾಸ್ತಿ ಹಾನಿ ಮಾಡುವುದನ್ನು ನಾವು ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ. ಇದರಿಂದ ಕರ್ನಾಟಕದ ಗೌರವ, ಘನತೆಗೆ ಧಕ್ಕೆಯಾಗುತ್ತದೆ. ಕಾನೂನು ಪಾಲನೆ ಎಲ್ಲರ ಕರ್ತವ್ಯ. ನೀವು ಹೋರಾಟ ಮಾಡುವುದಾದರೆ ಮಾಡಿ. 60% ನಾಮಫಲಕ ಹಾಕಬೇಕು ಎನ್ನುವುದನ್ನು ಕೇಳಲು ಒಂದು ಇತಿಮಿತಿ ಇದೆ ಎಂದರು.
ಈ ಹಿಂದೆ ಯಾರೋ ಒಬ್ಬರು ದೂರು ನೀಡಿದರು ಎಂದು ನಾರಾಯಣಗೌಡರ ಮೇಲೆ ಕೇಸ್ ದಾಖಲಾದಾಗ, ಅವರ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಪೊಲೀಸ್ ಅಧಿಕಾರಿಗಳ ಜತೆ ನಾನೇ ಮಾತನಾಡಿದ್ದೆ. ಕನ್ನಡ ಕಡ್ಡಾಯ ಮಾಡಲು ನೋಟೀಸ್ ನೀಡೋಣ. ಆದರೆ ಕಾನೂನು ಕೈಗೆತ್ತಿಕೊಳ್ಳಬಾರದು. ನಾರಾಯಣಗೌಡರಿಗೆ ಈ ಮಾತನ್ನು ಇವತ್ತೂ ಹೇಳುತ್ತೇನೆ, ಮುಂದೆಯೂ ಹೇಳುತ್ತೇನೆ ಎಂದರು.
ಪ್ರತಿಭಟನೆ ಮಾಡಲಿ, ಧಿಕ್ಕಾರ ಕೂಗಲಿ. ನಾವು ತಪ್ಪು ಮಾಡಿದರೆ ನಮ್ಮ ಮನೆ ಮುಂದೆಯೂ ಬಂದು ಪ್ರತಿಭಟನೆ ಮಾಡಲಿ. ನಾವೂ ಕನ್ನಡಿಗರೇ. ಕನ್ನಡದ ಬಗ್ಗೆ ನಮಗೂ ಬದ್ಧತೆ ಇದೆ. ಸಚಿವ ಸಂಪುಟದಲ್ಲಿ ನಿಮ್ಮ ಟಿಪ್ಪಣಿಗಳೇನೆ ಇದ್ದರೂ ಕನ್ನಡದಲ್ಲೇ ಇರಬೇಕು ಎಂದು ಮುಖ್ಯಮಂತ್ರಿಗಳು ಸಚಿವರುಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕನ್ನಡ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಯಾರೆಲ್ಲಾ ಕನ್ನಡ ನಾಮಫಲಕ ಹಾಕಿಲ್ಲ ಅವರಿಗೆ ನಾವು ನೊಟೀಸ್ ಜಾರಿ ಮಾಡುತ್ತೇವೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪಾಠ ಕಲಿಸುತ್ತೇವೆ ಎಂಬ ನಾರಾಯಣಗೌಡರ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಕನ್ನಡಪರ ಹೋರಾಟಗಾರರ ಸಹಕಾರ ಇಲ್ಲ ಎಂದು ನಾನು ಹೇಳುವುದಿಲ್ಲ. ಹಾಗೆಂದು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಏನು ಬೇಕಾದರೂ ಮಾಡಲಿ. ಅವರು ತಪ್ಪು ಮಾಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳಲು ನಾವು ಬಿಡುವುದಿಲ್ಲ. ಅನೇಕರು ಇಲ್ಲಿ ಬಂದು ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೊರಗಡೆಯಿಂದ ಬಂದವರು ಇಲ್ಲಿ ಬದುಕುತ್ತಿದ್ದಾರೆ. ಅವರಿಗೆ ಕನ್ನಡ ಬಳಕೆ ಬಗ್ಗೆ ಹೇಳೋಣ. ಹಾಗೆಂದು ಅವರನ್ನು ಬೆದರಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಅಕ್ರಮ ಮಾಡಿತ್ತು ಎಂಬ ಯತ್ನಾಳ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಲ್ಲಿ ಆ ವಿಚಾರ ಮಾತನಾಡುವುದು ಬೇಡ. ನಾವು ಅದೇ ವಿಚಾರವಾಗಿ ಜನರ ಗಮನ ಸೆಳೆದಿದ್ದೆವು. ಈಗ ಅವರು ಸೆಳೆಯುತ್ತಿದ್ದಾರೆ. ಬಹಳ ಸಂತೋಷ. ಮುಂದೆ ಅದರ ಬಗ್ಗೆ ಚರ್ಚೆ ಮಾಡೋಣ ಎಂದರು. ಎಲ್ಲಾ ವ್ಯಾಪಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಬೇಕು. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿ ಬಳಸಬೇಕು. ಸರ್ಕಾರ ನಿಮ್ಮ ಹಾಗೂ ನಿಮ್ಮ ಹಿತಾಸಕ್ತಿ ಕಾಯಲು ಬದ್ಧವಾಗಿದೆ ಎಂದು ಹೇಳಿದರು.
ಓದಿ: ವರ್ಷದ ಮೊದಲ ತಿಂಗಳೇ ಬ್ಯಾಂಕ್ಗಳಿಗೆ ಸಾಲು ಸಾಲು ರಜೆ; ಗ್ರಾಹಕರೇ ಬೇಗ ಕೆಲಸ ಮುಗಿಸಿ