ಬೆಂಗಳೂರು: ಕಾಂಗ್ರೆಸ್ ಆರೋಪಗಳಲ್ಲಿ ಧಮ್ ಇಲ್ಲ. ಕಾಂಗ್ರೆಸ್ನವರು ವಿವಾದ ಇಲ್ಲದಿದ್ದರೂ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಕೆ.ಕೆ. ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ರೌಡಿ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಇದರ ಬಗ್ಗೆ ಸ್ಪಷ್ಟಪಡಿಸಿದ್ಧಾರೆ. ನಮ್ಮ ಪಕ್ಷಕ್ಕೆ ಯಾವುದೇ ರೌಡಿಶೀಟರ್ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಫೈಟರ್ ರವಿ ಸೇರ್ಪಡೆ ಬಗ್ಗೆ ರಾಜ್ಯಾಧ್ಯಕ್ಷರೆ ಮಾತನಾಡುತ್ತಾರೆ. ಕಾಂಗ್ರೆಸ್ಗೆ ನಮ್ಮ ವಿರುದ್ಧ ಯಾವುದೇ ಅಜೆಂಡಾ ಸಿಕ್ತಿಲ್ಲ. ರಾಹುಲ್ ಗಾಂಧಿ ಹೋದ ಕಡೆಯೆಲ್ಲ ಕಾಂಗ್ರೆಸ್ ಸೋಲುತ್ತಿದೆ. ಚಾಮರಾಜನಗರಕ್ಕೆ ರಾಹುಲ್ ಬಂದು ಹೋದ ಮೇಲೆ ಅಲ್ಲಿನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತು ಎಂದು ಟಾಂಗ್ ನೀಡಿದರು.
ಪಕ್ಷದ ಜನ ಸಂಕಲ್ಪಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಲಕ್ಷ ಲಕ್ಷ ಜನ ಭಾಗವಹಿಸುತ್ತಿದ್ದಾರೆ. ಇಲ್ಲಿನ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಅಭ್ಯರ್ಥಿಗಳ ಆಯ್ಕೆಗೆ ಗುಜರಾತ್ ಮಾಡೆಲ್ ಅನುಸರಿಸುವ ವಿಚಾರವಾಗಿ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಂದ್ರೀಯ ಚುನಾವಣಾ ಸಮಿತಿ ನಿರ್ಧರಿಸಲಿದೆ.
ಚುನಾವಣಾ ಸಮಿತಿ ಸರಿಯಾದ ನಿರ್ಧಾರ ಕೈಗೊಳ್ಳಲಿದೆ. ನಮ್ಮ ಕಾರ್ಯಕರ್ತರಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ. ಜನರಲ್ಲೂ ಬಿಜೆಪಿ ಪರ ಒಲವು ಇದೆ. ಮತ್ತೆ ಬಿಜೆಪಿ ಗೆಲ್ಲಿಸಲು ಜನ ನಿರ್ಧರಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚುನಾವಣೆ ಸೋಲಿನ ಭಯದಿಂದ ಕಾಂಗ್ರೆಸ್ ಆರೋಪ: ಯಡಿಯೂರಪ್ಪ