ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಯಾರೇ ಎಷ್ಟೇ ಒತ್ತಡ ಹಾಕಿದರೂ ನಾವು ಯಾವ ಒತ್ತಡಕ್ಕಾಗಲಿ, ಪ್ರಭಾವಕ್ಕಾಗಲಿ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸರ್ಕಾರ ಯಾವುದಕ್ಕೂ ಮಣಿಯದೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಕೆಲವು ಪ್ರಭಾವಿಗಳ ಹೆಸರು ಕೇಳಿ ಬರುತ್ತಿರುವುದರಿಂದ ಪೊಲೀಸರು ಮತ್ತು ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕುವ ತಂತ್ರ ನಡೆದಿದೆ. ಸಚಿವ ಸಿ. ಟಿ. ರವಿ ಅವರು ತನಿಖಾಧಿಕಾರಿಗಳ ಮೇಲೆ ಕೆಲವರು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಭಾವಿಗಳ ಹೆಸರುಗಳು ಕೇಳಿ ಬರುತ್ತಿರುವುದರಿಂದ ಒತ್ತಡ ಇದೆ ಎಂದು ಹೇಳಿದ್ದಾರೆಯೇ ಹೊರತು ಒತ್ತಡ ಹಾಕಿದ್ದಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಯಾವುದೇ ಒತ್ತಡಕ್ಕೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಇನ್ನೂ ತಪ್ಪೇ ಮಾಡದವರು ಹೆದರುವ ಅಗತ್ಯವಿಲ್ಲ ಎಂದರು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಮಾದಕವಸ್ತುಗಳು ಪೂರೈಕೆಯಾಗುತ್ತಿದೆ ಎಂಬುದನ್ನು ಗೃಹ ಸಚಿವರು ಬಹಿರಂಗಪಡಿಸಿದರು.
ಡ್ರಗ್ಸ್ ಎಲ್ಲಿಂದ ಬರುತ್ತದೆ? ಇದರ ಹಿಂದಿರುವವರು ಯಾರು? ಮಧ್ಯವರ್ತಿಗಳಾರು? ಹೇಗೆ ಪೂರೈಕೆ ಮಾಡುತ್ತಿದ್ದಾರೆ? ಇದರ ಹಿಂದಿರುವ ಜಾಲ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ವಿದೇಶಗಳಿಂದ ನೇರವಾಗಿ ಕೊರಿಯರ್, ಡಾರ್ಕ್ ವೆಬ್ ಮೂಲಕ ನಡೆಯುವ ವ್ಯವಹಾರಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇಂದು ಎರಡು ಪ್ರತ್ಯೇಕ ಸಭೆಗಳನ್ನು ಕರೆಯಲಾಗಿದೆ. ಗಡಿ ಜಿಲ್ಲೆಯ ಎಸ್‍ಪಿಗಳ ಜೊತೆ ಏನೇನು ಕ್ರಮ ಕೈಗೊಳ್ಳಬೇಕು, ಚೆಕ್ಪೋಸ್ಟ್ಗಳಲ್ಲಿ ಬಿಗಿ ಕ್ರಮ ಜರುಗಿಸುವ ಬಗ್ಗೆ ಚರ್ಚೆ ಮಾಡಲಾಗುವುದು. ಬೆಂಗಳೂರಿನಲ್ಲಿ ಡ್ರಗ್ ನಿಯಂತ್ರಣದ ಬಗ್ಗೆ ಹಿರಿಯ ಅಧಿಕಾರಿಗಳ ಸಭೆಯನ್ನು ಮಾಡುತ್ತೇವೆ. ಒಟ್ಟಿನಲ್ಲಿ ಎಲ್ಲಾ ದಿಕ್ಕುಗಳಿಂದಲೂ ಡ್ರಗ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಾಜಿ ಡೆಪ್ಯುಟಿ ಸ್ಪೀಕರ್ ಯೋಗೀಶ್ ಭಟ್ ಅವರು ಈ ಹಿಂದೆ ಡ್ರಗ್ ನಿಯಂತ್ರಣ ಕುರಿತಂತೆ ವರದಿಯನ್ನು ನೀಡಿದ್ದರು. ಅವರು ಏನೇನು ಸಲಹೆ ಕೊಟ್ಟಿದ್ದಾರೆ, ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಮತ್ತೊಮ್ಮೆ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.