ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿಯಿಂದ ಲಾಕ್ಡೌನ್ ಮಾಡಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಜುಲೈ 15ರಿಂದ ಲಾಕ್ಡೌನ್ ಮುಗಿಯುವವರೆಗೆ ಬೆಂಗಳೂರು ಪ್ರಧಾನ ಪೀಠದಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ನೋಟಿಸ್ ಹೊರಡಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಲಾಕ್ಡೌನ್ ಜಾರಿಯಾಗುತ್ತಿರುವುದರಿಂದ ಸಿಬ್ಬಂದಿ ಕೊರತೆಯಾಗಲಿದ್ದು, ಲಾಕ್ಡೌನ್ ಆದೇಶವನ್ನು ಸರ್ಕಾರ ತೆರವು ಮಾಡುವವರೆಗೂ ಹೊಸ ಪ್ರಕರಣಗಳನ್ನು ದಾಖಲಿಸಲು ಅವಕಾಶವಿಲ್ಲ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಈಗಾಗಲೇ ಅನುಮತಿ ಪಡೆದುಕೊಂಡಿರುವವರಿಗೆ ಜುಲೈ 15ರ ನಂತರವೂ ಅರ್ಜಿಗಳನ್ನು ದಾಖಲಿಸಲು ಯಾವ ತೊಂದರೆಯಿಲ್ಲ. ಆದರೆ, ಲಾಕ್ಡೌನ್ ಅಂತ್ಯವಾಗುವವರೆಗೂ ಹೊಸ ಪ್ರಕರಣ ದಾಖಲಿಸಲು ಅನುಮತಿ ನೀಡುವುದಿಲ್ಲ. ಅಲ್ಲದೇ, ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ನಿಗಪಡಿಸಿರುವ ಅರ್ಜಿಗಳನ್ನು ಮುಂದೂಡಲಾಗುವುದು ಮತ್ತು ನಿಗದಿಪಡಿಸಿರುವ ಕೆಲ ನ್ಯಾಯಪೀಠಗಳ ಕಲಾಪಗಳೂ ರದ್ದಾಗಬಹುದು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಈ ಆದೇಶ ಬೆಂಗಳೂರು ಪ್ರಧಾನ ಪೀಠಕ್ಕೆ ಮಾತ್ರ ಅನ್ವಯಿಸಲಿದ್ದು, ಧಾರವಾಡ ಮತ್ತು ಕಲಬುರಗಿ ಪೀಠಗಳು ಎಸ್ಒಪಿ ಮಾರ್ಗಸೂಚಿ ಅನುಸಾರ ಕಾರ್ಯ ನಿರ್ವಹಿಸಲಿವೆ ಎಂದು ಸ್ಪಷ್ಟನೆ ನೀಡಲಾಗಿದೆ.