ಬೆಂಗಳೂರು: ದೆಹಲಿ ಪ್ರವಾಸದ ವೇಳೆ ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ಅಧ್ಯಕ್ಷರು ಮತ್ತು ಯಾವುದೇ ಕೇಂದ್ರ ಸಚಿವರನ್ನು ಭೇಟಿ ಮಾಡುವುದಿಲ್ಲ. ಈ ಬಗ್ಗೆ ಯಾವುದೇ ಚರ್ಚೆ ಸಹ ಸಾಧ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಯಶವಂತಪುರ ಬಳಿ ನಡೆಯುತ್ತಿರುವ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಸುಪ್ರೀಂಕೋರ್ಟ್‌ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಇದರ ಹೊರತಾಗಿ ವರಿಷ್ಠರ ಜೊತೆ ಯಾವುದೇ ಚರ್ಚೆ ಇಲ್ಲ. ಏ.3ರಂದು ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಬರುತ್ತಿದ್ದಾರೆ. ಆಗ ಅವರು ಮಾತುಕತೆ ಅವಕಾಶ ಕೊಟ್ಟರೆ ಸಂಪುಟ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ಮಂತ್ರಿಗಳನ್ನು ಭೇಟಿ ಮಾಡೋದು ಅಥವಾ ಅಧ್ಯಕ್ಷರ ಭೇಟಿ ಮಾಡುವ ಸಾಧ್ಯತೆಯೂ ಇಲ್ಲ. ಸಚಿವಾಕಾಂಕ್ಷಿಗಳು ಹೇಳಿರೋದನ್ನೆಲ್ಲ ಗಮನಿಸಿದ್ದೇವೆ. ಇದರ ಬಗ್ಗೆ ವರಿಷ್ಠರೊಂದಿಗೆ ಈಗಾಗಲೇ ಮಾತನಾಡಲಾಗಿದೆ. ಖಾಲಿ ಇರುವ ಸಚಿವ ಸ್ಥಾನ ತುಂಬುವ ಬಗ್ಗೆ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಜೆಪಿ ನಾಯಕರು ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ: ಸಿದ್ದರಾಮಯ್ಯ