ಬೆಂಗಳೂರು: ಉದ್ಯಮಿ ಸಿದ್ದಾರ್ಥ್ ಅಕಾಲಿಕ ಮರಣ ಒಂದು ರೀತಿಯಲ್ಲಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಿಂದಾಗಿ ಉದ್ಯಮಿಗಳಿಗೆ ಬದುಕಲು ಅವಕಾಶ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆಯೇ ಎನಿಸುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ್ ದೇಶಕ್ಕೆ ಒಂದು ರೀತಿಯ ಆಸ್ತಿ ಆಗಿದ್ದರು. ನಿರುದ್ಯೋಗ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಆದರೆ, ದೇಶದಲ್ಲಿ ಇರುವ ಆರ್ಥಿಕ ವ್ಯವಸ್ಥೆಯ ಅಡಿ ಉದ್ಯಮಿಗಳು ಬದುಕಲು ಅವಕಾಶಗಳಿಲ್ಲದೇ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದಾರ್ಥ್ ಇವತ್ತು ದೇಶದ ಹಾಗೂ ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ತಮ್ಮದೇ ಆದ ಹೊಸ ಛಾಪು ಮೂಡಿಸಿದ್ದರು, ಕಾಫಿ ಬೆಳಗಾರರಿಗೆ ಆಶಾದಾಯಕವಾಗಿ ಇದ್ದರು. ಪ್ರಪಂಚದಲ್ಲಿ ದೊಡ್ಡ ಉದ್ಯಮ ಸ್ಥಾಪಿಸುವ ಹೆಸರು ಪಡೆಯುವ ಆಸೆ ಹೊಂದಿದ್ದರು. ಅದಕ್ಕೆ ಎಲ್ಲೋ ಒಂದು ಕಡೆ ನಮ್ಮ ಕಾನೂನು ಚೌಕಟ್ಟುಗಳು ಅವರಿಗೆ ಹಿನ್ನಡೆ ತಂದವು ಎನ್ನುವ ಭಾವನೆ ಇಂದು ಎಲ್ಲಾ ಕಡೆ ಕಂಡು ಬರುತ್ತಿದೆ ಎಂದರು.
ಸಿದ್ದಾರ್ಥ್ ರೀತಿಯೇ ಮೂರ್ನಾಲ್ಕು ಉದ್ಯಮಿಗಳ ಜೀವನ ಆಗಿರುವುದರಿಂದ ಹೊಸದಾಗಿ ಉದ್ಯಮ ಛಾಪು ಮೂಡಿಸುವ ವ್ಯಕ್ತಿಗಳು ಸಮಾಜಕ್ಕೆ ಬರುವುದು ಕಡಿಮೆಯಾಗುತ್ತಿದೆ ಎನ್ನುವ ಭಾವನೆ ಮೂಡುತ್ತಿದೆ. ಈ ರೀತಿಯ ಉದ್ಯಮ ಕಟ್ಟುವವರ ಸಂಖ್ಯೆ ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.