ಬೆಂಗಳೂರು: ''ರಾಜ್ಯದ ಶಕ್ತಿಸೌಧವಾದ ವಿಧಾನಸೌಧದಲ್ಲಿ ಯಾವುದೇ ರೀತಿಯ ಭದ್ರತಾ ಲೋಪವಾಗದಂತೆ ಕ್ರಮವಹಿಸಲಾಗಿದೆ. ಸ್ಕ್ಯಾನರ್ಗಳು ದುರಸ್ತಿಗೆ ಬಂದಾಗ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಿ ಪ್ರತಿಯೊಬ್ಬರ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ. ಸದ್ಯಕ್ಕೆ ಬೆಳಗಾವಿ ಸುವರ್ಣಸೌಧದ ಯಂತ್ರಗಳನ್ನೇ ತರಿಸಿ ಅಳವಡಿಕೆ ಮಾಡಲಾಗಿದೆ'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಅವರು, ವಿಧಾನಸೌಧಕ್ಕೆ ಅಳವಡಿಸಿದ್ದ ಭದ್ರತಾ ಸಲಕರಣೆಗಳು ಸ್ಥಗಿತಗೊಂಡು ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸದೇ ನಿತ್ಯ ವಿಧಾನಸೌಧಕ್ಕೆ ಬರುವ ಸಾರ್ವಜನಿಕರ ತಪಾಸಣೆ ಮಾಡದೇ ಪ್ರವೇಶ ಕಲ್ಪಿಸಲಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಸ್ಕ್ಯಾನಿಂಗ್ ಯಂತ್ರಗಳ ಖರೀದಿಗೆ ಟೆಂಡರ್: ''ಭದ್ರತಾ ಲೋಪ ಆಗಬಾರದು ಎನ್ನುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಈ ಹಿಂದೆ ಅಳವಡಿಸಿದ್ದ ಸ್ಕ್ಯಾನರ್ ಉಪಕರಣಗಳು ಹಾಳಾಗಿವೆ. ಮೊದಲು ಡಿಪಿಆರ್ನಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಈಗ ಪೊಲೀಸ್ ಇಲಾಖೆ ವಹಿಸಿಕೊಂಡಿದೆ. ಹೊಸ ಭದ್ರತಾ ವ್ಯವಸ್ಥೆ ಕಲ್ಪಿಸಲು ಸ್ಕ್ಯಾನಿಂಗ್ ಯಂತ್ರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ'' ಎಂದರು.
''ಸ್ಕ್ಯಾನರ್ ದುರಸ್ತಿಗೆ ಬಂದ ನಂತರ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿಯೊಬ್ಬರ ತಪಾಸಣೆ ನಡೆಸಿಯೇ ಒಳ ಬಿಡಲಾಗುತ್ತಿದೆ. ಪ್ರಸ್ತುತ ತಾತ್ಕಾಲಿಕವಾಗಿ ಬೆಳಗಾವಿಯಿಂದ ಇಲ್ಲಿಗೆ ಸ್ಕ್ಯಾನಿಂಗ್ ಯಂತ್ರ ತಂದು ಅಳವಡಿಸಲಾಗಿದೆ. ಈ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಭದ್ರತಾ ಸಮಸ್ಯೆ ಇಲ್ಲ'' ಎಂದರು.
ಕೆ-ಸೆಟ್ ಪರೀಕ್ಷೆ ಕೆಇಎ ಹೆಗಲಿಗೆ: ''ಈವರೆಗೆ ಕೆ-ಸೆಟ್ ಪರೀಕ್ಷೆಗಳನ್ನು ವಿಶ್ವವಿದ್ಯಾಲಯಗಳು ಮಾಡುತ್ತಿದ್ದವು. ಆದರೆ, ಇನ್ಮುಂದೆ ಕೆ-ಸೆಟ್ ಪರೀಕ್ಷೆಯನ್ನು ಕೆಇಎ ಮೂಲಕ ಮಾಡುತ್ತೇವೆ. ಇದನ್ನು ಯುಜಿಸಿ ಗಮನಕ್ಕೂ ತರಲಾಗಿದೆ'' ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ಮಧು ಮಾದೇಗೌಡ ಅವರು, ಕೆ-ಸೆಟ್ ಪರೀಕ್ಷೆಗಳನ್ನ ವಿಶ್ವವಿದ್ಯಾಲಯ ಮಾಡಲು ಅವಕಾಶ ಮಾಡಿಕೊಡಬೇಕು. ಕೆ-ಸೆಟ್ ಪರೀಕ್ಷೆ ಮೈಸೂರು ವಿವಿ ಮಾಡುತ್ತಿತ್ತು. ಈಗ ಅದನ್ನ ರದ್ದು ಮಾಡಿದೆ. ಮತ್ತೆ ವಿವಿಗೆ ಕೆ-ಸೆಟ್ ಪರೀಕ್ಷೆ ಮಾಡೋ ಅವಕಾಶ ಕೊಡಬೇಕು ಎನ್ನುವ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು.
ಮೈಸೂರು ವಿಶ್ವವಿದ್ಯಾನಿಲಯ: ''ಕಳೆದ 11 ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ಮಾಡುತ್ತಿತ್ತು. ಈ ಪರೀಕ್ಷೆ ಬಗ್ಗೆ ಅನೇಕ ದೂರು ಬಂತು. ಪಾರದರ್ಶಕತೆ, ಗುಣಮಟ್ಟದ ತರುವ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಕೆಇಎಗೆ ಮಾಡಲು ನೀಡಲಾಗುತ್ತಿದೆ. ಕಮಿಟಿ ಮಾಡಿ ಕೆಇಎ ಮೂಲಕ ಕೆ-ಸೆಟ್ ಪರೀಕ್ಷೆ ಮಾಡುತ್ತೇವೆ. ಯುಜಿಸಿ ಗಮನಕ್ಕೂ ಇದನ್ನು ತರಲಾಗಿದೆ. ಕೆಇಎ ಅತ್ಯುತ್ತಮ ಸಂಸ್ಥೆ. ಯಾವುದೇ ದೊಡ್ಡ ಆರೋಪ ಇಲ್ಲ. ಪಾರದರ್ಶಕವಾಗಿ ಕೆಇಎ ಪರೀಕ್ಷೆ ಮಾಡುತ್ತದೆ. ಹೀಗಾಗಿ ಕೆ-ಸೆಟ್ ಪರೀಕ್ಷೆ ಕೆಇಎ ಮೂಲಕ ಇನ್ನು ಮುಂದೆ ಮಾಡುತ್ತೇವೆ'' ಎಂದರು.
ಇದೇ ವೇಳೆ, ''ರಾಜ್ಯದ ಪ್ರಥಮ ದರ್ಜೆ ಕಾಲೇಜು ಮತ್ತು ಇನ್ನಿತರ ಪದವಿ ಕಾಲೇಜುಗಳಲ್ಲಿ ಪಠ್ಯ ಪುಸ್ತಕದ ಕೊರತೆ ಇಲ್ಲ. ಸಾಕಷ್ಟು ಪಠ್ಯ ಪುಸ್ತಕ ಲಭ್ಯ ಇದೆ. ಪುಸ್ತಕ ಕೊರತೆ ಆಗದಂತೆ ಕ್ರಮವಹಿಸುತ್ತೇವೆ'' ಎಂದು ಬಿಜೆಪಿ ಸದಸ್ಯ ತಳವಾರ ಸಾಬಣ್ಣ ಪ್ರಶ್ನೆಗೆ ಸಚಿವ ಅಶ್ವಥ್ ನಾರಾಯಣ ಉತ್ತರಿಸಿದರು.
ಪ್ರವಾಸಿತಾಣವಾದ ಉಲ್ಲಾಳ ಬೀಚ್: 'ಉಲ್ಲಾಳ ಬೀಚ್ ಅನ್ನು ಪ್ರವಾಸಿತಾಣವಾಗಿ ಗುರಿತಿಸಿದ್ದು, ಕಡಲ ತೀರದ ಈ ಪ್ರವಾಸಿತಾಣದ ಅಭಿವೃದ್ಧಿ ಕುರಿತು ಹಣಕಾಸು ಲಭ್ಯತೆ ಆಧರಿಸಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ಸಚಿವ ಆನಂದ್ ಸಿಂಗ್ ಪರವಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಫಾರೂಕ್ ಪರವಾಗಿ ಬೋಜೇಗೌಡ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕರಾವಳಿ ಪ್ರದೇಶಗಳನ್ನು ಸರ್ಕಾರ ಕಡೆಗಣಿಸಿಲ್ಲ: ''ಉಲ್ಲಾಳ ಬೀಚನ್ನು ಪ್ರವಾಸಿ ತಾಣವಾಗಿ ಗುರಿತಿಸಲಾಗಿದ್ದು, ಮೂಲಸೌಕರ್ಯ ಕಲ್ಪಿಸುವ ಕುರಿತು ಹಣಕಾಸು ಲಭ್ಯತೆ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಉಲ್ಲಾಳ ಸೇರಿ ರಾಜ್ಯದ ಕಡಲ ತೀರಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಪರಿಶೀಲಿಸಲಾಗುತ್ತದೆ'' ಎಂದರು. ''ಕರಾವಳಿ ಪ್ರದೇಶಗಳನ್ನು ನಮ್ಮ ಸರ್ಕಾರ ಕಡೆಗಣಿಸಿಲ್ಲ. ಮಲತಾಯಿ ಧೋರಣೆ ತಳೆದಿಲ್ಲ. ಅತಿ ಹೆಚ್ಚಿನ ಅನುದಾನ ಕರಾವಳಿಗೆ ಕೊಡಲಾಗಿದೆ. ಹಣಕಾಸು ಲಭ್ಯತೆ ಆಧಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಿಂದುಳಿದ ತಾಲೂಕುಗಳ ವಾಸ್ತವ ಪರಿಶೀಲನೆಗಾಗಿ ಹೊಸ ಸಮಿತಿ ರಚಿಸಲು ಚಿಂತನೆ : ಸಚಿವ ಜೆ ಸಿ ಮಾಧುಸ್ವಾಮಿ