ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ಮಾಡಲು ದೆಹಲಿಗೆ ಭೇಟಿ ನೀಡಿದ್ದೆ. ಆಸ್ಪತ್ರೆಯಲ್ಲಿ ಅವರನ್ನ ಭೇಟಿ ಮಾಡಿದೆ. ಇಡಿಯವರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿ ಪರಮೇಶ್ವರ್, ನನ್ನ ಬಳಿ ಡಿಕೆಶಿ ತಾವು ಯಾವುದೇ ತಪ್ಪು ಮಾಡಿಲ್ಲ ಅಂತ ಹೇಳಿದ್ದಾರೆ. ಅಕೌಂಟ್ ಮಾಡುವಾಗ ಕೆಲವು ತಪ್ಪಾಗಿದೆ. ಇದರ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ. ಕಾನೂನಿನಡಿ ಹೊರಬರುತ್ತೇನೆ ಅಂತ ಡಿಕೆಶಿ ವಿಶ್ವಾಸದಿಂದ ಹೇಳಿದರು ಎಂದರು.
ದೆಹಲಿಗೆ ಹೋದ ಮೇಲೆ ಹೈಕಮಾಂಡ್ ಭೇಟಿ ಸಹಜ. ಹೀಗಾಗಿ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಿದ್ದೆ. ಡಿಕೆಶಿ ಬಗ್ಗೆ ಸೋನಿಯಾ ಕೂಡ ನೋವು ಹೊರಹಾಕಿದ್ರು. ನಾವು ಅವರ ಬೆಂಬಲಕ್ಕೆ ಇರಬೇಕು ಅಂತ ಹೇಳಿದ್ರು ಎಂದರು.
ರಾಜ್ಯ ರಾಜಕಾರಣದ ಚರ್ಚೆ: ರಾಜ್ಯ ರಾಜಕಾರಣದ ಬಗ್ಗೆ ಸೋನಿಯಾ ಗಾಂಧಿಯವರ ಜೊತೆ ಚರ್ಚೆ ನಡೆಯಿತು. ಸಿದ್ದರಾಮಯ್ಯ, ನನ್ನ ನಡುವೆ ಶತೃತ್ವವಿಲ್ಲ. ನಾವಿಬ್ಬರೂ ಚೆನ್ನಾಗಿದ್ದರೆ ಕಾಂಗ್ರೆಸ್ ಬಲಿಷ್ಠವಾಗುತ್ತದೆ. ಹೀಗಾಗಿ ಕೆಲವೊಂದು ಷಡ್ಯಂತ್ರ ನಡೆದಿದೆ. ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ. ಆಗಿನಿಂದಲೂ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರ ಸಂಪುಟದಲ್ಲಿಯೂ ಕೆಲಸ ಮಾಡಿದ್ದೇವೆ. ಕೆಲವೊಂದು ಅಭಿಪ್ರಾಯ ಬೇರೆ ಬೇರೆ ಇರಬಹುದು. ನನ್ನ ಕೆಲವು ಅಭಿಪ್ರಾಯ ಅವರು ಕೇಳದಿರಬಹುದು. ಅವರ ಕೆಲವು ಅಭಿಪ್ರಾಯ ನಾನು ಕೇಳದಿರಬಹುದು. ಆದರೆ ಇಬ್ಬರೂ ಎಲ್ಲೂ ಭಿನ್ನವಾಗಿಲ್ಲ. ನಮ್ಮ ನಡುವೆ ಯಾವುದೇ ಭಿನ್ನಾಬಿಪ್ರಾಯವಿಲ್ಲ ಎಂದರು.
ಮೂಲ ವಲಸೆ ಎಂಬುದಿಲ್ಲ: ಮೂಲ ವಲಸಿಗರು, ಕಾಂಗ್ರೆಸಿಗರು ಎಂಬ ಬೇಧವಿಲ್ಲ. ಹಾಗಿದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗ್ತಿರಲಿಲ್ಲ. ಅವರು ಪ್ರತಿಪಕ್ಷ ನಾಯಕರೂ ಆಗ್ತಿರಲಿಲ್ಲ. ಮೂಲ ಕಾಂಗ್ರೆಸಿಗರು ಹೋರಾಟವನ್ನೇ ಮಾಡ್ತಿದ್ರು. ಆದರೆ ಅಂತಹ ಭಿನ್ನಾಬಿಪ್ರಾಯವಿಲ್ಲ. ನಾವೆಲ್ಲ ಒಟ್ಟಿಗೆ ಸೇರಿ ಪಕ್ಷ ಕಟ್ಟಬೇಕು. ಎಲ್ಲರೂ ಸೇರಿಯೇ ಮತ್ತೆ ಅಧಿಕಾರಕ್ಕೆ ಬರಬೇಕು. ಸಾಮೂಹಿಕ ನಾಯಕತ್ವದಿಂದ ಮಾತ್ರ ಎಲ್ಲವೂ ಸಾಧ್ಯ. ಇದನ್ನೇ ಸೋನಿಯಾ ಬಳಿ ಕೂಡ ಚರ್ಚಿಸಿದ್ದೇವೆ ಎಂದು ವಿವರಿಸಿದರು.
ನನ್ನ ಬಿಟ್ಟು ಪಕ್ಷ ಕಟ್ಟೋಕೆ ಆಗಲ್ಲ: ಪ್ರತಿಪಕ್ಷ ನಾಯಕ ಸ್ಥಾನದ ಬಗ್ಗೆ ಮಾಧ್ಯಮಗಳಲ್ಲಿ ಇದರ ಬಗ್ಗೆ ಚರ್ಚೆಯಾಗಿದೆ. ಸೋನಿಯಾ ಬಳಿ ಪ್ರತ್ಯೇಕ ಚರ್ಚೆ ನಡೆಸಿಲ್ಲ. ಹೈಕಮಾಂಡ್ ಇದರ ಬಗ್ಗೆ ಗಮನಹರಿಸುತ್ತದೆ. ಭೇಟಿಗೆ ಸಿದ್ದರಾಮಯ್ಯಗೆ ಅವಕಾಶ ತಪ್ಪಿ ತಮಗೆ ಸಿಕ್ಕಿರುವ ಬಗ್ಗೆ ಮಾತನಾಡಿದ ಅವರು, ಅಂತಹದ್ದೇನು ಕಲ್ಪಿಸಿಕೊಳ್ಳಬೇಕಿಲ್ಲ. ನನಗೂ ಕೆಲವು ಭಾರಿ ಅವಕಾಶ ಕೊಟ್ಟಿರಲಿಲ್ಲ. ಹಾಗೆ ಅವರಿಗೂ ಕೊಟ್ಟಿರಲಿಲ್ಲ ಎನ್ನಿಸುತ್ತದೆ. ಇದಕ್ಕೆ ವಿಶೇಷ ಅರ್ಥ ಬೇಕಿಲ್ಲ. ನಾನು ದೆಹಲಿಯಲ್ಲಿ ಇದ್ದೆ. ಹಾಗಾಗಿ ಸಿಎಲ್ಪಿ ಸಭೆಗೆ ಬಂದಿರಲಿಲ್ಲ. ಸಿಎಲ್ಪಿ ಇರೋದು ನಮಗೆ ಗೊತ್ತಿರಲಿಲ್ಲ. ದಿನೇಶ್ ಫೋನ್ ಮಾಡಿ ಕರೆದ ಮೇಲೆ ಗೊತ್ತಾಯ್ತು. ನನ್ನನ್ನ ದೂರ ಇಟ್ಟು ಪಕ್ಷ ಕಟ್ಟೋಕೆ ಆಗಲ್ಲ. ಪರಮೇಶ್ವರ್ ಬಿಟ್ಟು ಪಕ್ಷ ಕಟ್ಟೋದು ಸುಲಭವಲ್ಲ. ಒಬ್ಬಬ್ಬರಿಗೂ ಒಂದೊಂದು ಶಕ್ತಿ ಇರುತ್ತದೆ. ಹೀಗಾಗಿ ಸಾಮೂಹಿಕ ನಾಯಕತ್ವವವೇ ನಮ್ಮ ಪ್ರತಿಪಾದನೆ ಎಂದರು.
ಯಾರ ಬಗ್ಗೆಯೂ ಚಾಡಿ ಹೇಳಲ್ಲ: ನಾನು ಯಾರ ಬಗ್ಗೆಯೂ ಚಾಡಿ ಹೇಳುವವನಲ್ಲ. ಸೋನಿಯಾ ಗಾಂಧಿ ಅವರ ಮುಂದೆ ಹೇಳಲ್ಲ. ಹೈಕಮಾಂಡ್ನಿಂದ ಆದೇಶ ಬಂದರೆ ಮಾಡಲೇಬೇಕು. 2018ರಲ್ಲಿ ಸಿದ್ದು ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೆವು. ಅವರು ಸಿಎಂ ಆಗಿದ್ದರು, ಅದಕ್ಕೆ ಅವರ ನೇತೃತ್ವವಿತ್ತು. ಆದರೂ ನಾನು ಪಕ್ಷದ ಅಧ್ಯಕ್ಷನಾಗಿದ್ದೆ. ಬರುವ ಡಿಸೆಂಬರ್ನಲ್ಲೇ ಮಧ್ಯಂತರ ಚುನಾವಣೆ ಬಗ್ಗೆ ದೆಹಲಿ ಕಾರಿಡಾರ್ನಲ್ಲಿ ಚರ್ಚೆಯಾಗ್ತಿದೆ. ಅದಕ್ಕೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಪ್ರವಾಹದ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಅವರು ಅವರ ವಾದವನ್ನ ಸಮರ್ಥನೆ ಮಾಡಿಕೊಳ್ತಾರೆ. ವಸ್ತುಸ್ಥಿತಿ ಬೇರೆಯೇ ಇದೆ. ಇನ್ನೂ ಸಂತ್ರಸ್ತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಜನ ಅನ್ನ, ನೀರಿಲ್ಲದೇ ಬೀದಿಯಲ್ಲಿದ್ದಾರೆ. ಅವರಿಗೆ ವ್ಯವಸ್ಥೆ ಮಾಡುವ ಕೆಲಸ ನಡೆಯುತ್ತಿಲ್ಲ. 17 ಜಿಲ್ಲೆಗಳಲ್ಲಿ ಬೆಳೆ ಬೆಳೆಯೋಕೂ ಕಷ್ಟವಾಗಿದೆ. ಯುದ್ಧೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಬೇಕು.
ಆದರೆ, ರಾಜ್ಯ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ನಿನ್ನೆಯಷ್ಟೇ 1 ಸಾವಿರ ಕೋಟಿ ಘೋಷಿಸಿದ್ದಾರೆ. ಅದು ಜನರಿಗೆ ತಲುಪುವುದು ಯಾವಾಗ? ಇನ್ನೂ ನಿಯೋಗ ಕೊಂಡೊಯ್ಯೋಕೆ ಆಗ್ತಿಲ್ಲ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದ್ರು ಒಂದು ಪೈಸೆಯನ್ನೂ ಘೋಷಿಸಿಲ್ಲ. ನಾವು ಸಾಕಷ್ಟು ತೆರಿಗೆಯನ್ನು ಕೇಂದ್ರಕ್ಕೆ ಸಲ್ಲಿಸ್ತೇವೆ. ವಿಶ್ವಮಟ್ಟದಲ್ಲಿ ಕರ್ನಾಟಕ ಮೊದಲಿದೆ. ಹೀಗಿದ್ದರೂ ಕೇಂದ್ರಕ್ಕೆ ರಾಜ್ಯದ ಬಗ್ಗೆ ಆಸಕ್ತಿಯಿಲ್ಲ. ಅವರಿಗೆ ಇಲ್ಲಿನ ಪರಿಸ್ಥಿತಿ ಬೇಕಾಗಿಯೂ ಇಲ್ಲ ಎಂದರು.