ಬೆಂಗಳೂರು: ಪಾದರಾಯನಪುರ ಗಲಭೆ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್ ಸಿಕ್ಕಿದೆ. ಬಿಬಿಎಂಪಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಲು ಮೊದಲೇ ಸಂಚು ರೂಪಿಸಲಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಅಲ್ಲದೆ ಗಲಭೆ ಹಿಂದೆ ಕಾರ್ಪೊರೇಟರ್ ಇಮ್ರಾನ್ ಕೈವಾಡವಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ.
ಪಾದರಾಯನಪುರದಲ್ಲಿದ್ದ ಜನರನ್ನು ಕ್ವಾರಂಟೈನ್ ಮಾಡಲು ಪೊಲೀಸರು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಇವರ ಮೇಲೆ ಅಲ್ಲಿನ ಜನರು ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಗಲಾಟೆ ಬಳಿಕ ಆರೋಪಿ ಅಬ್ದುಲ್ ಬಿಹಾರ್ ಹಾಗೂ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರ ಆಪ್ತನ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ತುಣುಕೊಂದು ಪೊಲೀಸರ ಕೈ ಸೇರಿದೆ. ಅದರಲ್ಲಿ ಕೊರೊನಾ ಶಂಕಿತರನ್ನು ಆರೋಗ್ಯಾಧಿಕಾರಿಗಳು ಕ್ವಾರಂಟ್ವೆನ್ ಮಾಡಕೂಡದು. ಒಂದು ವೇಳೆ ಬಲವಂತ ಮಾಡಿದರೆ ಗಲಾಟೆ ಮಾಡಿ. ಶಾಸಕ ಜಮೀರ್ ಅಹಮದ್ ಬರುವ ತನಕ ಹೋಗಬೇಡಿ ಎಂದು ಇಮ್ರಾನ್ ಕರೆ ಮಾಡಿ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಸೋರಿಕೆಯಾದ ಆಡಿಯೋ ಕರೆ ಕುರಿತು ಪ್ರತಿಕ್ರಿಯಿಸಿರುವ ನಗರ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್, ಆಡಿಯೋ ಈಗಾಗಲೇ ನಮ್ಮ ಕೈ ಸೇರಿದೆ. ತನಿಖಾ ತಂಡ ಈ ಕುರಿತಂತೆ ತನಿಖೆ ನಡೆಸುತ್ತಿದ್ದು, ಯಾವ ಟೈಂನಲ್ಲಿ ಯಾವಾಗ ಮಾತನಾಡಿರೋದು ಎಂಬುದನ್ನು ಪತ್ತೆ ಮಾಡಲಾಗುವುದು. ಆ ಆಡಿಯೋ ನಿಜವಾಗಿದ್ದರೆ ಸಿಡಿಆರ್ಗೆ ಹಾಕಲಾಗುವುದು. ಇದಾದ ನಂತರ ಯಾರು ಯಾರೊಂದಿಗೆ ಮಾತನಾಡಿದ್ದಾರೆ. ಅವರಿಗೆ ಏನು ಸಂಬಂಧ ಅನ್ನೋದನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.