ಬೆಂಗಳೂರು: ಕೊರೊನಾ ಕಾರಣದಿಂದಾಗಿ ಲೋಕೋಪಯೋಗಿ ಇಲಾಖೆ ಸೇರಿದಂತೆ ಇಡೀ ಸರ್ಕಾರದಲ್ಲಿಯೇ ಅನುದಾನದ ಕೊರತೆ ಇದೆ. ಆದರೂ, ಮಂಜೂರಾಗಿರುವ ಕಾಮಗಾರಿಗಳನ್ನು ಮುಂದುವರೆಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಕಾರಣದಿಂದ ಸರ್ಕಾರಕ್ಕೆ ಬರಬೇಕಾದ ಆದಾಯ ಬಂದಿಲ್ಲ. ಬದಲಾಗಿ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಣೆ, ಉಚಿತ ರೇಷನ್ ವಿತರಣೆ, ಸಂತ್ರಸ್ತರಿಗೆ ನೆರವು ಹೀಗೆ ಖರ್ಚು ವೆಚ್ಚಗಳೇ ಹೆಚ್ಚಾಗಿವೆ ಎಂದರು.
ಇಂತಹ ಬಿಕ್ಕಟ್ಟಿನ ಸನ್ನಿವೇಶ ಎದುರಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಒಂದು ಕಡೆ ಆದಾಯ ಕಡಿಮೆ, ಮತ್ತೊಂದೆಡೆ ಖರ್ಚು ಜಾಸ್ತಿ. ಇದನ್ನು ನಿರ್ವಹಿಸಲು ಸಿಎಂ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರ ಕಾರ್ಯವೈಖರಿಯನ್ನು ಡಿಸಿಎಂ ಸಮರ್ಥಿಸಿಕೊಂಡಿದ್ದಾರೆ.
ಲಭ್ಯವಿರುವ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿ ಮಾಡುತ್ತಿದ್ದೇವೆ. ಆರಂಭಗೊಂಡಿರುವ ಕಾಮಗಾರಿ ಮುಂದುವರೆಸಲು ತೊಂದರೆ ಇಲ್ಲ. ಆದರೆ, ಹೊಸ ಯೋಜನೆಗಳನ್ನು ಮಾತ್ರ ಹಣಕಾಸು ಲಭ್ಯತೆ ನೋಡಿಕೊಂಡು ಆರಂಭಿಸಲಾಗುತ್ತದೆ ಎಂದರು. ಲೋಕೋಪಯೋಗಿ ಇಲಾಖೆಗೆ ಬಜೆಟ್ನಲ್ಲಿ ನೀಡಿರುವ ಅನುದಾನವನ್ನು ಪರಿಷ್ಕರಣೆ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸುವ ಯಾವುದೇ ಪ್ರಸ್ತಾಪ ಇಲ್ಲ. ನಮ್ಮ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಯಾರನ್ನೂ ಕೆಲಸದಿಂದ ತೆಗೆದಿಲ್ಲ ಎಂದು ಡಿಸಿಎಂ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಶಿಕ್ಷಣ ಇಲಾಖೆ ಅನುಮತಿ ನೀಡಿದಾಗ ಆರಂಭಿಸುತ್ತೇವೆ ಎಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದರು.