ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಸಚಿವರ ಕಾರ್ಯವೈಖರಿ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಈಗ ತಿರುಗಿ ಬಿದ್ದಿದ್ದಾರೆ. ಶಾಸಕರ ಅಹವಾಲುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಅವಮಾನಗೊಳಿಸುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರು ಅಸಮಾಧಾನಗೊಂಡಿದ್ದಾರೆ. ನಾಳೆ ಗುರುವಾರ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಸಚಿವರು ವಿರುದ್ಧ ಆಡಳಿತ ಪಕ್ಷದ ಶಾಸಕರ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ.
27 ಶಾಸಕರಿಂದ ಸಿಎಂಗೆ ಒತ್ತಾಯ: ಸಚಿವರ ತಾತ್ಸಾರ ಧೋರಣೆ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿರುವ ಕಾಂಗ್ರೆಸ್ನಲ್ಲಿನ ಅತೃಪ್ತ ಶಾಸಕರ ಗುಂಪು ನಾಳಿನ ಸಭೆಯಲ್ಲಿ ಮಂತ್ರಿಗಳ ವರ್ತನೆ ವಿರುದ್ಧ ತಮ್ಮ ಅತೃಪ್ತಿ ಹೊರಹಾಕಲಿದ್ದಾರೆ. ಇದಕ್ಕಾಗಿಯೇ ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರನ್ನು ಒಳಗೊಂಡಂತೆ ಒಟ್ಟು 27 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಸಿ.ಎಸ್. ನಾಡಗೌಡ, ಬಿ.ಆರ್. ಪಾಟೀಲ್ , ಶಿವಲಿಂಗೇಗೌಡ ಸೇರಿದಂತೆ ಹಲವಾರು ಶಾಸಕರು ಪತ್ರಕ್ಕೆ ಸಹಿ ಹಾಕಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಜು.27 ರಂದು) ಸಂಜೆ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನ ಕರೆದಿದ್ದಾರೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕಳೆದ ವಾರ ಜು.19 ರಂದು ಸಂಜೆ ನಿಗದಿಪಡಿಸಲಾಗಿತ್ತು. ಆದರೆ ಎಐಸಿಸಿ ಮಾಜಿ ಅಧ್ಯಕ್ಷರಾದ ಕಾಂಗ್ರೆಸ್ ನ ಹೈಕಮಾಂಡ್ ರಾಹುಲ್ ಗಾಂಧಿ ಸಚಿವರ ಸಭೆ ನಡೆಸುವ ಸಾಧ್ಯತೆಗಳಿರುವುದರಿಂದ ಶಾಸಕಾಂಗ ಪಕ್ಷದ ಸಭೆ ರದ್ದುಪಡಿಸಲಾಗಿತ್ತು. ಕೆಲವು ಶಾಸಕರ ಆಗ್ರಹದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುರುವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಇದಕ್ಕೂ ಮುನ್ನ ಸಂಜೆ ಸಚಿವ ಸಂಪುಟ ಸಭೆಯನ್ನ ಸಿಎಂ ಸಿದ್ದರಾಮಯ್ಯ ನಾಳೆ ನಡೆಸಲಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವಾರು ಶಾಸಕರುಗಳು ತಮ್ಮ ಅಹವಾಲು ಮಂಡಿಸಲಿದ್ದಾರೆ. ಬಹುತೇಕ ಸಚಿವರುಗಳ ಕಾರ್ಯವೈಖರಿ ಬಗ್ಗೆ ತಮಗಿರುವ ಅಸಮಾಧಾನ ಬಹಿರಂಗಪಡಿಸುವ ಮುನ್ಸೂಚನೆಯನ್ನು ಆಡಳಿತ ಪಕ್ಷದ ಶಾಸಕರುಗಳು ಈಗಾಗಲೇ ನೀಡಿದ್ದಾರೆ. ಅಧಿಕಾರಿಗಳ ಮತ್ತು ರಾಜ್ಯ ಸರಕಾರಿ ನೌಕರರ ವರ್ಗಾವಣೆಯಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಳ್ಳದಿರುವುದು, ಶಾಸಕರ ಬೇಡಿಕೆಗಳನ್ನು ಪರಿಗಣಿಸದಿರುವುದು, ಶಾಸಕರಿಗೆ ಅಸಹಕಾರ ನೀಡುವ ಅಧಿಕಾರಿ ಮತ್ತು ಸರಕಾರಿ ನೌಕರರನ್ನು ಬದಲಾವಣೆ ಮಾಡದಿರುವುದು, ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದು, ಬಿಜೆಪಿ ಸರಕಾರದ ಅವಧಿಯ ಕಾಮಗಾರಿಗಳನ್ನು ತಡೆ ಹಿಡಿದು ಹಣ ಬಿಡುಗಡೆ ಮಾಡದಿರುವುದೂ ಸೇರಿದಂತೆ ಹತ್ತಾರು ಪ್ರಮುಖ ಸಂಗತಿಗಳನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಲು ಆಡಳಿತ ಪಕ್ಷದ ಶಾಸಕರುಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಹಲವಾರು ಸಚಿವರ ವರ್ತನೆ ಬಗ್ಗೆ ಕಾಂಗ್ರೆಸ್ ನ ಶಾಸಕರು ಅಸಮಾಧಾನ ಹೊಂದಿದ್ದು ಶಾಸಕಾಂಗ ಪಕ್ಷದ ಸಭೆಯಲ್ಲಿ ಅನೇಕ ಸಚಿವರ ವಿರುದ್ಧ ಧ್ವನಿ ಮೊಳಗಿಸಲಿದ್ದಾರೆ ಎಂದು ಹೇಳಲಾಗಿದೆ. ಶಾಸಕರಿಗೆ ಗೌರವ ಕೊಡುವುದೂ ಸೇರಿದಂತೆ, ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವಂತೆ ತಾಕೀತು ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಸಭೆಯಲ್ಲಿ ಅತೃಪ್ತ ಹಲವು ಶಾಸಕರು ಮನವಿ ಮಾಡುವ ಸಾಧ್ಯತೆಗಳಿವೆ.
ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸುವ ಬಗ್ಗೆ ಚರ್ಚೆ: ''ಆಡಳಿತ ಪಕ್ಷದ ಶಾಸಕರ ಕುಂದುಕೊರತೆ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್. ಪಾಟೀಲ್ ತಿಳಿಸಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ನಿಗಮ ಮಂಡಳಿಗಳಿಗೆ ತಮ್ಮನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನಾಗಿ ನೇಮಿಸುವಂತೆ ಒತ್ತಾಯವನ್ನೂ ಸಹ ಮಾಡುವ ಸಾಧ್ಯತೆಗಳಿವೆ. ಸರಕಾರದ ನಿಗಮ ಮಂಡಳಿಗಳಿಗೆ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಚಿವ ಸ್ಥಾನ ಸಿಗದ ಶಾಸಕರಿಗೆ ಅಧಿಕಾರ ಹಂಚಿಕೆ ಮಾಡದಿರುವ ಬಗ್ಗೆಯೂ ಧ್ವನಿಯೆತ್ತಲಿದ್ದಾರೆ. ಲೋಕಸಭೆ ಚುನಾವಣೆ ಸಿದ್ಧತೆ ಹಾಗೂ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಸಾರ್ವಜನಿಕರಿಗೆ ತಲುಪಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಕುರಿತು ಚರ್ಚೆಗಳು ನಡೆಯುವ ಸಂಭವವಿದೆ.
ಇದನ್ನೂ ಓದಿ: ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ಪ್ರಕರಣ ತಪ್ಪಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ