ಬೆಂಗಳೂರು : ಕೊರೊನಾ ಸೋಂಕಿನಿಂದ ರಾಜ್ಯ ಕಂಗೆಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಂತ್ರಿಮಂಡಲದ ಬಹುತೇಕ ಸಚಿವರು ತಮ್ಮ ಖಾತೆಗಳ ಕಡೆ ತಿರುಗಿಯೂ ನೋಡದೆ ನಿರ್ಲಕ್ಷ್ಯತೆ ತೋರುತ್ತಿರುವ ಅಂಶ ಕೇಂದ್ರ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕೊರೊನಾ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಲು ಕಾರ್ಯಾಂಗವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಬಹುತೇಕ ಸಚಿವರು ತಮ್ಮ ತಮ್ಮ ಖಾತೆಗಳ ಕತೆ ಏನಾಗಿದೆ?ಎಂದು ತಿಳಿಯುವ ಗೋಜಿಗೂ ಹೋಗಿಲ್ಲ.
ಸರ್ಕಾರದ ಪ್ರತಿ ಇಲಾಖೆಗಳಿಗೂ ರಾಜ್ಯಾದ್ಯಂತ ತನ್ನದೇ ಕಾರ್ಯವ್ಯಾಪ್ತಿಯಿದೆ. ಕೊರೊನಾ ಭೀತಿಯಿಂದ ಎಲ್ಲ ವಲಯಗಳೂ ಕಂಗಾಲಾಗಿವೆ. ಆದರೆ, ಬಹುತೇಕ ಸಚಿವರು ತಮ್ಮ ತಮ್ಮ ಕ್ಷೇತ್ರದಲ್ಲೋ, ಜಿಲ್ಲೆಯಲ್ಲೋ ನೆಲೆಸಿ ಜನರನ್ನು ಮನೆ ಒಳಗೆ ಕಳಿಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಒಂದು ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಅಂದರೆ ರಾಜ್ಯವ್ಯಾಪಿ ಇರುವ ಅದರ ಕಾರ್ಯಕ್ಷೇತ್ರದಲ್ಲಿ ಆಗಿರುವ ತೊಂದರೆ ಗಮನಿಸುವುದು ಮತ್ತು ಪರಿಹಾರ ಕಲ್ಪಿಸಿಕೊಡುವುದು ಸಚಿವರ ಕೆಲಸ.
ಆದರೆ, ಬಹುತೇಕ ಜನರಿಗೆ ತಿಳುವಳಿಕೆ ನೀಡಿ, ಮನೆಯಲ್ಲಿ ಕೂರಿಸುವುದನ್ನು ಹೊರತುಪಡಿಸಿದರೆ ಬೇರೆ ಕೆಲಸವೇ ಇಲ್ಲ. ಈ ಕೆಲಸವನ್ನು ಶಾಸಕರು, ಅಧಿಕಾರಿಗಳು ಮಾಡಬೇಕು. ಆದರೆ, ಸಚಿವರಾದವರೂ ಈ ಕೆಲಸಕ್ಕೆ ಮುಂದಾಗಿ ತಮ್ಮ ತಮ್ಮ ಖಾತೆಗಳನ್ನು ಮರೆತಿರುವ ಬಗ್ಗೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿರುವ ಅಂಶ ಬೆಳಕಿಗೆ ಬಂದಿದೆ. ಮಂತ್ರಿಗಳಾದವರು ತಮ್ಮ ತಮ್ಮ ಖಾತೆಗಳಿಗೆ ಏನಾಗಿದೆ?. ಕೊರೊನಾ ಬಿಸಿಗೆ ತಮ್ಮ ಖಾತೆಯ ಯಾವ್ಯಾವ ಅಂಗಗಳು ಸುಟ್ಟು ಹೋಗಿವೆ?. ಅದನ್ನು ಸರಿಪಡಿಸಲು ಏನು ಮಾಡಬೇಕು?ಅನ್ನುವ ಯೋಚನೆಯೇ ಇಲ್ಲದೆ ಬಹುತೇಕ ಸಚಿವರು ತಮ್ಮ ತಮ್ಮ ಕ್ಷೇತ್ರಗಳಿಗೆ, ಜಿಲ್ಲೆಗಳಿಗೆ ಸೀಮಿತಗೊಂಡಿರುವುದು ಸರಿಯಲ್ಲ ಎಂಬುದನ್ನು ಕೇಂದ್ರದ ಸಚಿವರೊಬ್ಬರು ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟದ ನಾಲ್ಕೈದು ಮಂದಿ ಸಚಿವರನ್ನು ಬಿಟ್ಟರೆ ಉಳಿದವರೆಲ್ಲ ಇಂತಹ ನಿರ್ಲಕ್ಷ್ಯದ ಧೋರಣೆ ತೋರುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.