ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಳಸೇತುವೆಯಲ್ಲಿ ನೀರು ನುಗ್ಗಿ ಮಹಿಳೆಯ ಬಲಿ ಪಡೆದುಕೊಂಡಿರುವ ಘಟನೆ ಸಂಚಲನ ಮೂಡಿಸಿದ್ದು, ಇದರ ಬೆನ್ನಲೇ ಇದೇ ಮಾದರಿಯ 18ಕ್ಕೂ ಅಧಿಕ ಕೆಳಸೇತುವೆಗಳು ವಾಹನ ಸವಾರರಿಗೆ ಕಂಟಕವಾಗಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ, ಶಿವಾನಂದ ರೈಲ್ವೆ ಕೆಳಸೇತುವೆ ಭಯನಕವಾಗಿದ್ದು, ಇತ್ತ ಹೋಗುವ ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗಿದೆ.
ಅದೇ ರೀತಿ, ಕೆಆರ್ ಸರ್ಕಲ್, ಪ್ಯಾಲೇಸ್ ರೋಡ್ ಗಾಲ್ಫ್ ಕೆಳಸೇತುವೆ, ಮಾಗಡಿ ರೋಡ್‌ನ ಹೌಸಿಂಗ್ ಬೋರ್ಡ್ ಬಳಿಯ ಕೆಳಸೇತುವೆ, ಟೋಲ್ ಗೇಟ್ ಕೆಳಸೇತುವೆ, ನಾಯಂಡಹಳ್ಳಿ ಬಳಿಯ ಕೆಳಸೇತುವೆಗಳು ತುಂಬಾ ಅಪಾಯವಾಗಿವೆ. ಹೀಗೆ, ನಗರದ ಎಲ್ಲೆಡೆ 18 ರಿಂದ 20 ಕೆಳಸೇತುವೆಗಳು ಯಮಸ್ವರೂಪಿಯಾಗಿದ್ದು, ವಾಹನ ಸವಾರರು ಇಲ್ಲಿ ಪ್ರಯಾಣಿಸುವಾಗ ತುಸು ಎಚ್ಚರ ವಹಿಸಬೇಕಾಗಿದೆ. ಮಳೆ ಬಂದ 10 ನಿಮಿಷಕ್ಕೆ ಈ ಕೆಳಸೇತುವೆಗಳು ಕೆರೆಯಂತಾಗುತ್ತಿವೆ. ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಕೆಳಸೇತುವೆಗಳನ್ನು ದಾಟಿ ಮನೆಗೆ ಹೋಗುವಾಗ ಎಚ್ಚರ ವಹಿಸಿ ಎಂದು ಹಲವರು ಮನವಿ ಮಾಡಿದ್ದಾರೆ.
ಅಂಡರ್ ಪಾಸ್ ಡ್ರೈನೇಜ್ ವ್ಯವಸ್ಥೆಗೆ ಒತ್ತು: ಪ್ರತಿ ವರ್ಷದ ಮಳೆಗಾಲದಲ್ಲೂ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ವಾಹನ ಸವಾರರು ಅನಾಹುತಕ್ಕೀಡಾದ ಘಟನೆಗಳು ನಡೆಯುತ್ತಿವೆ. ಈ ನಡುವೆ ಮಳೆಗಾಲದಲ್ಲಿ ನೀರು ನಿಲ್ಲುವ ಪ್ರಮುಖ 18 ರಿಂದ 20 ಅಂಡರ್ ಪಾಸ್‌ಗಳನ್ನು ಬಿಬಿಎಂಪಿ ಗುರುತಿಸಿದ್ದು, ನಿನ್ನೆ ಅಂಡರ್ ಪಾಸ್ ನಲ್ಲಿ ದುರಂತ ಸಂಭವಿಸಿರುವ ಹಿನ್ನಲೆ ಇಂಥ ಘಟನೆ ಮರುಕಳಿಸದಂತೆ ನಗರಾಡಳಿತ ಅಂಡರ್ ಪಾಸ್ ಡ್ರೈನೇಜ್ ವ್ಯವಸ್ಥೆಗೆ ಒತ್ತು ಕೊಡಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಹಲವೆಡೆ ಹೂಳು, ಕಸ ಕಡ್ಡಿಗಳನ್ನು ವಿಲೇವಾರಿ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್, ಕೆ.ಆರ್, ಸರ್ಕಲ್, ವಿದ್ಯಾರಣ್ಯಪುರ ಸೇರಿದಂತೆ ಹಲವೆಡೆ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಮಳೆಗೆ ಮತ್ತೊಂದು ಬಲಿ: ಭಾನುರೇಖಾ ಕುಟುಂಬಸ್ಥರಿಂದ ಬಿಬಿಎಂಪಿ ವಿರುದ್ಧ FIR ದಾಖಲು
ನಗರ ವ್ಯಾಪ್ತಿಯ ಕೆಳ ಸೇತುವೆಗಳು ಬಂದ್: ಇನ್ನು ಧಾರಾಕಾರ ಮಳೆ ಹಿನ್ನೆಲೆ ನೀರು ಸುಗಮವಾಗಿ ಹೋಗದ ನಗರ ವ್ಯಾಪ್ತಿಯ ಎಲ್ಲ ಮಾದರಿಯ ಕೆಳ ಸೇತುವೆಗಳನ್ನು ಬಂದ್ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಕೆಆರ್ ಸರ್ಕಲ್‌ನ ಕೆಳ ಸೇತುವೆಯಲ್ಲಿ ಯುವತಿ ಸಾವಿನ ಪ್ರಕರಣ ಸಂಬಂಧ ಈಗಾಗಲೇ ನಗರದಲ್ಲಿರುವ ಎಲ್ಲ ಮಾದರಿಯ ಕೆಳಸೇತುವೆಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಯಾವ ಕೆಳಸೇತುವೆಯಲ್ಲಿ ನೀರು ಸುಗಮವಾಗಿ ಹೋಗುವುದಿಲ್ಲವೂ, ಆ ಕೆಳಸೇತುವೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು ಎಂದಿದ್ದಾರೆ.
ಭಾನುವಾರ ಮ. 3.15 ರಿಂದ ಸಂಜೆ 4 ಗಂಟೆ ವೇಳೆಗೆ 50 ಮಿ. ಮೀಟರ್ ಮಳೆ ಸುರಿದಿದೆ. 45 ನಿಮಿಷದ ಅವಧಿಯಲ್ಲೇ ಭಾರಿ ಮಳೆ ಬಂದಿದ್ದರಿಂದ ಅವಾಂತರ ಆಗಿದೆ. ಕೆಲವು ಅಹಿತರ ಘಟನೆ ನಡೆದಿದೆ. ಈಗ ಕೆಳ ಸೇತುವೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ಯಾವ ಕೆಳ ಸೇತುವೆಗಳಲ್ಲಿ ಒಳಚರಂಡಿ ಇಲ್ಲವೂ ಅಥವಾ ನೀರು ಸುಗಮವಾಗಿ ಹರಿಯುವುದಿಲ್ಲವೋ ಅದನ್ನು ಬಂದ್ ಮಾಡುತ್ತೇವೆ. ಇಂದು ಸಂಜೆಯೊಳಗೆ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.