ಚಾಮರಾಜನಗರ : ಚಿರತೆ ಸೆರೆಗಾಗಿ ಬೋನಿನಲ್ಲಿ ಕಟ್ಟಿದ್ದ ಮೇಕೆಯನ್ನು ಕಳ್ಳರು ಹೊತ್ತೊಯ್ದಿರುವ ವಿಚಿತ್ರ ಪ್ರಕರಣವೊಂದು ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯಪುರ ಗ್ರಾಮದ ಬಳಿ ಚಿರತೆ ದಾಳಿ ನಡೆಸಿ ಕರು, ಕುರಿಗಳನ್ನು ಬಲಿ ಪಡೆದಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಗ್ರಾಮದ ರೈತರು ಒತ್ತಾಯಿಸಿದ್ದರು.
ಅದರಂತೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಅರಣ್ಯಾಧಿಕಾರಿಗಳು ಚಿರತ ಕುಮಾರ್ ಅವರ ನೇತೃತ್ವದ ತಂಡ ಚಿರತೆ ಸೆರೆಗೆ ಬೋನು ಇರಿಸಿದ್ದರು. ಸಂಜೆ ಬೋನಿಗೆ ಮೇಕೆ ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಬಂದಿದ್ದರು. ಬೆಳಗ್ಗೆ ಬೋನಿನ ಹತ್ತಿರ ಹೋದಾಗ ಕಳ್ಳರ ಕೈ ಚಳಕದಿಂದ ಮೇಕೆ ಮಾಯವಾಗಿದೆ. ಚಿರತೆ ಏನಾದರೂ ಮೇಕೆಯನ್ನು ಎಳೆದುಕೊಂಡು ಹೋಗಿದೆಯಾ ಎಂದ್ರೆ ಚಿರತೆ ಬಂದಿದ್ದ ಕುರುಹು ಕೂಡ ಇಲ್ಲ. ಹೀಗಾಗಿ ಕಳ್ಳರು ಮೇಕೆಯನ್ನು ಬಿಚ್ಚಿಕೊಂಡು ಹೋಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಆನೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆ : ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ತಾಲೂಕಿನ ಪುಣಜನೂರು ಸಮೀಪ ಆನೆಯೊಂದು ಹೆದ್ದಾರಿ ತಡೆದು ದಾಂಧಲೆ ನಡೆಸಿದೆ. ಮೊದಲು ಕಬ್ಬು ತುಂಬಿದ್ದ ಲಾರಿಗಳನ್ನು ಅಡ್ಡ ಹಾಕುತ್ತಿದ್ದ ಆನೆ ಈಗ ತರಕಾರಿ, ಸರಕು ತುಂಬಿದ ಆನೆಗಳನ್ನು ತಡೆಯುತ್ತಿದೆ. ಜೂನ್ 24 ರ ಶುಕ್ರವಾರ ಕೂಡ ಲಾರಿಯನ್ನು ತಡೆದಿದ್ದರಿಂದ 1 ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಬೈಕ್ ಕದಿಯುತ್ತಿದ್ದ ಓರ್ವ ಅರೆಸ್ಟ್ : ಎರಡು ಬೈಕ್ ವಶ : ನಿಲ್ಲಿಸಿದ ಬೈಕ್ ಗಳನ್ನು ಕದಿಯುತ್ತಿದ್ದ ಓರ್ವನನ್ನು ಬಂಧಿಸಿ ಆತನನಿಂದ ಭದ್ರಾವತಿ ಪೊಲೀಸರು ಎರಡು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕ್ ಮುಂದೆ ತಮ್ಮ ಬೈಕ್ ನಿಲ್ಲಿಸಿ ಬ್ಯಾಂಕ್ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ ಬೈಕ್ ಕಾಣೆಯಾಗಿತ್ತು. ಈ ಕುರಿತು ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪ್ರಕರಣದ ತನಿಖೆ ನಡೆಸಿದಾಗ ಶಿವಮೊಗ್ಗ ತಾಲೂಕು ಬೆಳಕಟ್ಟೆಯ ನಿವಾಸಿ ಪ್ರಭು ಅಲಿಯಾಸ್ ಕೋಳಿ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತನಿಖೆ ವೇಳೆ ಆರೋಪಿ ಪ್ರಭು ತಾನೇ ಬೈಕ್ ಕದ್ದಿರುವ ವಿಚಾರವನ್ನು ಒಪ್ಪಿಕೊಂಡಿದ್ದಾನೆ. ಈತನಿಂದ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಟಿವಿಎಸ್ ವಿಕ್ಟರ್ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಡಾ ಆ್ಯಕ್ಟಿವಾ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಬೆಲೆ 80 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಇನ್ನು, ಈ ಪ್ರಕರಣ ಭೇದಿಸಿದ ಭದ್ರಾವತಿಯ ಪಿಐ ರಾಘವೇಂದ್ರ ಕಾಂಡಿಕೆ ಹಾಗೂ ಪಿಎಸ್ ಶರಣಪ್ಪ ಹಂಡ್ರುಗಲ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. ಹಾಲಪ್ಪ, ಚಿನ್ನ ನಾಯಕ್, ಮೌನೇಶ್, ನಾರಾಯಣ ಸ್ವಾಮಿ, ಚಿಕ್ಕಪ್ಪ ಹಾಗೂ ವಿಜಯ್ ರನ್ನು ಎಸ್ಪಿ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ : Leopard death: ಬಂಡೀಪುರ ಅರಣ್ಯದಲ್ಲಿ 3 ಚಿರತೆಗಳ ಶವ ಪತ್ತೆ; ಸಾಕು ನಾಯಿಯ ಕಳೇಬರಕ್ಕೆ ವಿಷ ಬೆರೆಸಿದ ವ್ಯಕ್ತಿ ಸೆರೆ