ಬೆಂಗಳೂರು: ನಗರದಲ್ಲಿ ಸರಗಳ್ಳತನ ಹಾಗೂ ಮೊಬೈಲ್ ಕಳ್ಳತನ ಸಾಮಾನ್ಯವಾಗಿದೆ. ಆದರೆ, ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಕಳ್ಳರು ಕೈಚಳಕ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಇಎಂಐ ಕಟ್ಟಲು ತಂದಿದ್ದ 4.5 ಲಕ್ಷ ರೂಪಾಯಿ ಹಣವನ್ನು ಕಾರಿನ ಗ್ಲಾಸ್ ಒಡೆದು ಖದೀಮರು ದೋಚಿದ್ದಾರೆ.
ಕಳೆದ ಮೂರು ದಿನದ ಹಿಂದೆ ಲಕ್ಷ್ಮೀಶ್ ಎಂಬುವವರು ಮಹದೇವಪುರದ ಕೆನರಾ ಬ್ಯಾಂಕ್ಗೆ ಹಣ ಕಟ್ಟಲು ಹೋಗಿದ್ದರು. ಆದರೆ, ಕೌಂಟರ್ ಬಳಿ ಹಣ ಪಾವತಿಸುವಾಗ ಪ್ಯಾನ್ ಕಾರ್ಡ್ ಮರೆತು ಬಂದಿರುವುದು ಗೊತ್ತಾಗಿತ್ತು. ಹೀಗಾಗಿ ಮನೆಗೆ ವಾಪಸ್ ತೆರಳಬೇಕಾಯ್ತು. ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಹಣ ಇಟ್ಟಿದ್ದರು. ಮಾರ್ಗ ಮಧ್ಯೆ ಪರಿಚಯಸ್ಥರನ್ನು ಭೇಟಿಯಾಗುವ ಸಲುವಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದರು.
ಲಕ್ಷ್ಮೀಶ್ ಅವರನ್ನು ಮಹದೇವಪುರದಿಂದ ಓಜಿ ಕುಪ್ಪಂ ಗ್ಯಾಂಗ್ನ ನಾಲ್ವರು ಖದೀಮರು ಕಮೀಷನರ್ ಕಚೇರಿವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಕಾರಿನಲ್ಲಿ ಹಣ ಇಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಸಮಯ ನೋಡಿಕೊಂಡು ಕಾರಿನ ಗಾಜು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಕಂಕನಾಡಿಯಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು
ಇನ್ನೂ ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಕಳ್ಳರು ಯಾರ ಭಯವಿಲ್ಲದೇ ಹಣ ದೋಚಿದ್ದಾರೆ. ಕಳ್ಳತನವಾಗಿ ಮೂರು ದಿನವಾಗಿದ್ದರೂ ಸಹ ಖದೀಮರನ್ನು ಪೊಲೀಸರು ಬಂಧಿಸಿಲ್ಲ ಎನ್ನುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.