ಬೆಂಗಳೂರು : ಮತ್ತು ಬರಿಸುವ ಔಷಧ ನೀಡಿ ನಿವೃತ್ತ ಐಎಎಸ್ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮೇಶ್ವರ್ ಕೆಲಸದ ನಿಮಿತ್ತ ಹೊರಹೋಗಿದ್ದರು. ಈ ವೇಳೆ ತನ್ನ ಸಹೋದರ ಸಂತೋಷ್‌ಗೆ ಮನೆಯಲ್ಲಿರಲು ತಿಳಿಸಿದ್ದರು. ಹಾಗೆಯೇ ಮನೆ ಕಾವಲುಗಾರನಾಗಿ ನೇಪಾಳ ಮೂಲದ ಬಹುದ್ದೂರ್ ಎಂಬಾತನನ್ನು ನೇಮಿಸಿದ್ದರು. ಆದ್ರೆ ಕಾವಲುಗಾರ ಬಹದ್ದೂರ್ ರಾತ್ರಿ ವೇಳೆ ಸಂತೋಷ್‌ಗೆ ಊಟದಲ್ಲಿ ಮತ್ತು ಬರಿಸುವ ಮದ್ದು ನೀಡಿದ್ದಾನೆ ಎನ್ನಲಾಗಿದೆ. ನಂತರ ಸಂತೋಷ್ ಪ್ರಜ್ಞೆ ತಪ್ಪಿದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾನೆ.
ಸಂತೋಷ್ ಪ್ರಜ್ಞಾವಸ್ಥೆಗೆ ಬಂದು ನೋಡಿದಾಗ ಕಾವಲುಗಾರ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.