ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಸರಗಳ್ಳತನ ಪ್ರಕರಣಕ್ಕೆ ಬ್ರೇಕ್ ಹಾಕಿದ್ದ ಕಳ್ಳರೀಗ ಲಾಕ್ಡೌನ್ ನಿಯಮಗಳು ಸಡಿಲಿಕೆಯಾಗುತ್ತಿದ್ದಂತೆ ಮತ್ತೆ ತಮ್ಮ ಬಾಲ ಬಿಚ್ಚಿದ್ದಾರೆ.
ನಿನ್ನೆ ಬೆಳಗ್ಗೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿ ಕಳ್ಳನೋರ್ವ ಎಸ್ಕೇಪ್ ಆಗಿದ್ದು, ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ತಡರಾತ್ರಿ ಆರೋಪಿಯನ್ನ ಬಂಧಿಸಿದ್ದಾರೆ.ಯಾರೇ ಕಳ್ಳ/ಆರೋಪಿಗಳು ಸಿಕ್ಕರೆ ಕೊರೊನಾ ಹಿನ್ನೆಲೆ ವೈದ್ಯಕೀಯ ತಪಾಸಣೆಯನ್ನು ಠಾಣೆಗೆ ಕರೆ ತರುವಾಗ ಕಡ್ಡಾಯವಾಗಿ ಮಾಡಿಸಬೇಕು. ಪೊಲೀಸರು ರಾತ್ರಿಯಾದ ಕಾರಣ ಆರೋಪಿಯ ಕೊರೊನಾ ಟೆಸ್ಟ್ ಮಾಡಿಸದೇ ಆತನನ್ನು ಠಾಣೆಯಲ್ಲಿ ಇರಿಸಿದ್ದಾರೆ.
ಅಲ್ಲದೆ ಕೊರೊನಾ ಜಾಸ್ತಿ ಇರುವ ಪ್ರದೇಶಗಳಲ್ಲೊಂದಾದ ಪಾದರಾಯನಪುರದಲ್ಲಿ ಕಳ್ಳ ವಾಸವಾಗಿದ್ದ. ಇದರಿಂದ ವಿಜಯನಗರ ಠಾಣಾ ಸಿಬ್ಬಂದಿ ಈಗ ಉಸಿರುಗಟ್ಟಿಸಿದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದು, ತಕ್ಷಣ ಆರೋಪಿಗೆ ಕೊರೊನಾ ತಪಾಸಣೆ ನಡೆಸಲು ಕೆಲ ಸಿಬ್ಬಂದಿ ರಾತ್ರಿಯೇ ಪಟ್ಟು ಹಿಡಿದಿದ್ದರು. ರಾತ್ರಿಯಾದ ಕಾರಣ ತಪಾಸಣೆ ನಡೆಸಲು ಸಾಧ್ಯವಾಗಿಲ್ಲವೆಂದು ಠಾಣಾಧಿಕಾರಿ ತಿಳಿಸಿದ್ದು, ಇಂದು ತಪಾಸಣೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಪರಿಣಾಮ ರಾತ್ರಿ ಠಾಣೆಯ ಸಿಬ್ಬಂದಿ ಭಯದಲ್ಲೇ ಕಾಲ ಕಳೆದಿದ್ದಾರೆ.