ಬೆಂಗಳೂರು: ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್. ಕಳ್ಳತನ ಮಾಡಿದ ಮೇಲೂ ಮನೆ ಮಾಲೀಕರಿಗೆ ತಿಳಿಯದಂತೆ ಸೈಲೆಂಟ್ ಆಗಿ ಎಸ್ಕೇಪ್ ಆಗುತ್ತಿದ್ದ. ಇದೀಗ ಈ ಸೈಲೆಂಟ್ ಕಳ್ಳ ಸಂಜಯ್ ನಗರ ಪೊಲೀಸರ ಅತಿಥಿಯಾಗಿದ್ದಾನೆ. ತಮಿಳುನಾಡು ಮೂಲದ ಇಸಯ್ ರಾಜ್ ಬಂಧಿತ ಆರೋಪಿ.
ಕೆಲ ವರ್ಷಗಳ ಹಿಂದೆ ಕುಟುಂಬಸಮೇತ ಅಮೃತಹಳ್ಳಿಯಲ್ಲಿ ವಾಸವಾಗಿದ್ದ. ಜೀವನಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಡ್ರಗ್ಸ್ ವ್ಯಾಮೋಹಿಯಾಗಿದ್ದ ಈತನ ವಿರುದ್ಧ ಸಂಪಿಗೆಹಳ್ಳಿ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಡ್ರಗ್ಸ್ ಚಟ ಬಿಡಿಸಲು ಕುಟುಂಬಸ್ಥರು ಈತನನ್ನು ಹತ್ತಿರದ ರಿಹ್ಯಾಬಿಲಿಟೇಷನ್ ಸೆಂಟರ್ಗೆ ಸೇರಿಸಿದ್ದರು. ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೊರಬಂದಿದ್ದ. ಕೈಯಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ದಿನದ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದ, ಹೀಗಾಗಿ ಇಸಯ್ ರಾಜ್ಗೆ ಕಳ್ಳತನದ ದಾರಿ ಹಿಡಿದಿದ್ದಾನೆ.
ಹಣಕ್ಕಾಗಿ ಕಳ್ಳತನ ಮಾಡಲು ಪ್ಲ್ಯಾನ್ ಮಾಡಿ, ಅಪಾರ್ಟ್ಮೆಂಟ್ಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ. ಫ್ಲೆಂಬರ್, ಎಲೆಕ್ಟ್ರಿಕಲ್ ಸೋಗಿನಲ್ಲಿ ಅಪಾರ್ಟ್ಮೆಂಟ್ಗಳ ಒಳಗೆ ನುಗ್ಗುತ್ತಿದ್ದ. ಕಿಟಕಿ ಪಕ್ಕದಲ್ಲಿರುವ ಬೀಗ ಹಾಕಿದ ಮನೆಯನ್ನ ಟಾರ್ಗೆಟ್ ಮಾಡಿಕೊಂಡು ಅದೇ ಅಪಾರ್ಟ್ಮೆಂಟ್ನ ಟೆರೇಸ್ನಲ್ಲಿ ಉಳಿದುಕೊಳ್ಳುತ್ತಿದ್ದ. ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಕಳ್ಳತನ ಮಾಡುತ್ತಿದ್ದ. ಕೃತ್ಯವೆಸಗುವಾಗ ಮನೆಯ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗದಂತೆ ನಿಗಾವಹಿಸುತ್ತಿದ್ದ.
ಇದನ್ನೂ ಓದಿ: ಪೊಲೀಸ್ ಬಂದೋಬಸ್ತ್ನಲ್ಲಿ ಪರೀಕ್ಷೆ ಬರೆದು ಕಾರಾಗೃಹಕ್ಕೆ ತೆರಳಿದ ಆರೋಪಿ
ಕಳ್ಳತನ ಮಾಡಿದ ಬಳಿಕ ಒಬ್ಬಂಟಿಗನಾಗಿ ಹೊರ ಹೋದರೆ, ಅನುಮಾನ ಬರುವುದಾಗಿ ಭಾವಿಸಿ ಆ ರಾತ್ರಿ ಟೇರೆಸ್ನಲ್ಲಿ ಉಳಿದುಕೊಂಡು ಮಾರನೇ ದಿನ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರು ಬರುವುದನ್ನ ಕಂಡು ಅವ್ರ ಜೊತೆಯಲ್ಲಿ ಎಸ್ಕೇಪ್ ಆಗುತ್ತಿದ್ದ. ಅದೇ ರೀತಿ ಕಳೆದ ಮಾರ್ಚ್ ನಲ್ಲಿ ಸಂಜಯ್ ನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ದೋಚಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಬಾಲರಾಜ್ ಸೆರೆಯಾಗಿದ್ದ, ಸಿಸಿಟಿವಿ ಸೇರಿದಂತೆ ತಾಂತ್ರಿಕವಾಗಿ ತನಿಖೆ ನಡೆಸಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಬಂಧನದಿಂದ 12 ಪ್ರಕರಣ ಪತ್ತೆಯಾಗಿದ್ದು, 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.