ಆನೇಕಲ್: ಇತ್ತೀಚೆಗೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ಪಿಯು ವಿದ್ಯಾರ್ಥಿನಿ ರೇಣುಕಾ ಮಾದರ ಮೇಲಿನ ಅತ್ಯಾಚಾರ ಒಳಗೊಂಡಂತೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆ ಭಾವ್ಕೇದಿ ಪಂಚಾಯತ್ ಎದುರು 10-12 ವಯಸ್ಸಿನ ಇಬ್ಬರು ದಲಿತ ಮಕ್ಕಳು ಬಹಿರ್ದೆಸೆಗೆ ಹೋದ ಕಾರಣಕ್ಕೆ ವಿಕೃತ ಜಾತಿ ಮನಸ್ಸುಗಳು ಕೊಂದು ಹಾಕಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಯುವ ಸಮುದಾಯ ಮಾನವ ಸರಪಳಿ ನಿರ್ಮಿಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ರೇಣುಕಾ ಮಾದರ ಮೇಲಿನ ಅತ್ಯಾಚಾರವೂ ಜಾತಿ ಕಾರಣಕ್ಕೆ ನಡೆದಿದೆ. ಬಾವ್ಕೇದಿ ಪಂಚಾಯತ್ ಎದುರು ಶೌಚಕ್ಕೆ ಹೋದ ರೋಶನಿ ಬಾಲ್ಮೀಕಿ, ಅವಿನಾಶ್ ಬಾಲ್ಮೀಕಿ ಎಂಬ ಅಪ್ರಾಪ್ತೆಯರನ್ನ ಕೊಂದಂತಹ ಮನಸ್ಸುಗಳೇ ಇಂದು ದೇಶವನ್ನು ಸಂವಿಧಾನವನ್ನು ಮೂದಲಿಸುತ್ತಿರುವುದಲ್ಲದೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದ ಸರ್ಕಾರಗಳ ವಿರುದ್ಧ ಪ್ರತಿಭಟನಾಕಾರರು ಹರಿಹಾಯ್ದರು.
ಈ ಆಧುನಿಕ ಕಾಲಘಟ್ಟದಲ್ಲೂ ಆಳುವ ಹುಚ್ಚು ಜಾತಿ ಮನಸ್ಸುಗಳ ಕೈಗೆ ಸಿಕ್ಕಿ ದಲಿತ, ಅಲ್ಪಸಂಖ್ಯಾತ ಹಾಗೂ ಎಲ್ಲ ಜಾತಿಯ ಬಡವರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇವೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ ವ್ಯವಸ್ಥೆಗಳೆಲ್ಲವೂ ಮೌನವಹಿಸುವ ಸ್ಥಿತಿಗೆ ಭೀತಿಯನ್ನು ಸರ್ಕಾರಗಳು ಒಳಗಿಂದ ಒಳಗೆ ಕುಮ್ಮಕ್ಕು ನೀಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇನ್ನು, ಡಾ.ಬಿಆರ್ ಅಂಬೇಡ್ಕರ್ ಪುತ್ಥಳಿಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಸಂಘಟಕರು ಕೇಂದ್ರ-ರಾಜ್ಯದ ಜಾತಿ ಹಿತದ ವಿರುದ್ಧ ಧಿಕ್ಕಾರ ಕೂಗಿದರು.