ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಸದನದಲ್ಲಿ ರವಿಕುಮಾರ್ ಧಿಕ್ಕಾರ ಕೂಗಿದ್ದರು. ಈ ವಿಷಯ ಕುರಿತು ನಿಯಮ 242 ಬಿ ಅಡಿ ನೀತಿ ನಿರೂಪಣಾ ಸಮಿತಿಗೆ ವರ್ಗಾಯಿಸುವಂತೆ ಪ್ರತಿಪಕ್ಷಗಳು ಪ್ರಸ್ತಾಪಿಸಿದ್ದವು. ಬಳಿಕ ಸಭಾಪತಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರಿಂದ ಎರಡು ದಿನದಿಂದ ಸದನದಲ್ಲಿ ನಡೆಯುತ್ತಿದ್ದ ಧರಣಿ ಅಂತ್ಯವಾಗಿದೆ.
ವಿಧಾನಪರಿಷರ್ನ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಕಳೆದ ಎರಡು ದಿನಗಳಿಂದ ಸದನ ನಡೆಯುತ್ತಿಲ್ಲ. ಇದಕ್ಕೆ ಒಂದು ಅಂತ್ಯ ಬೇಕು, ಈ ಜವಾಬ್ದಾರಿ ಸರ್ಕಾರಕ್ಕೆ ಬೇಕು. ಈ ಪದ್ಧತಿ ಸರಿಯಲ್ಲ. ಹೀಗಾದರೆ ನಾವು ಬಜೆಟ್ ಅಧಿವೇಶನ ಆಗುವವರೆಗೂ ಸದನಕ್ಕೆ ಬರಲ್ಲ. ಹಿಂದೆ ನೀವು ಇದೇ ರೀತಿ ಮಾಡಿದಾಗ ನಾವು ಮಾತುಕತೆ ನಡೆಸಿ ಸರಿಪಡಿಸಿದ್ದೇವೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಇದನ್ನು ಮುಗಿಸಿ, ಬಿಜೆಪಿಯವರು ಕೂಡ ವಿಷಾದ ವ್ಯಕ್ತಪಡಿಸಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.
ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ದೊರೆಸ್ವಾಮಿ ಅವರಿಗೆ ಧಿಕ್ಕಾರ, ಅವರಿಗೆ ನಾಚಿಕೆಯಾಗಬೇಕು ಎಂದು ರವಿಕುಮಾರ್ ಹೇಳಿದ್ದಾರೆ. ಪ್ರಧಾನಿ ಮೋದಿ ಕೊಲೆ ಮಾಡಿ ಎಂದ ಕೊಲೆ ಪಾತಕರಿಗೆ ಬೆಂಬಲ ಕೊಡಬೇಕೆ ಎಂದು ತೇಜಸ್ವಿನಿಗೌಡ ಹೇಳಿಕೆ ನೀಡಿದ್ದಾರೆ. ಆದರೆ ಚುನಾವಣೆಯಲ್ಲಿ ಪಕ್ಷವನ್ನು ಮುಗಿಸಬೇಕು ಎಂದಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋದಿ ಅವರನ್ನು ಮುಗಿಸಬೇಕು ಎಂದು ಅಪಾರ್ಥ ಮಾಡಿಕೊಂಡು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ನನಗೆ ಬಹಳ ನೋವಾಗಿದೆ. ಆಡಳಿತ ಪಕ್ಷದ ಸದಸ್ಯರು ಸ್ಪಷ್ಟೀಕರಣ ಕೊಡಲಿ ಎಂದರು.
ನಂತರ ಸ್ಪಷ್ಟೀಕರಣ ನೀಡಿದ ರವಿಕುಮಾರ್, ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರಸ್ತಾಪ ಮಾಡಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮೊದಲು ನೇರವಾಗಿ ಸ್ಪಷ್ಟೀಕರಣ ನೀಡಲಿ. ನಂತರ ಸಾವರ್ಕರ್ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು. ಆದರೂ ಇತಿಹಾಸ ವಿವರ ಮುಂದುವರೆಸಿದ ರವಿಕುಮಾರ್ ನಡೆಗೆ ಅಸಮಧಾನ ವ್ಯಕ್ತಪಡಿಸಿ, ಸದನದ ಬಾವಿಯಲ್ಲಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.