ಬೆಂಗಳೂರು: ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ಕ್ಯಾಬಿನೆಟ್ ದರ್ಜೆಯ ವೇತನ ಮತ್ತು ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಸಚಿವರಂತೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡುವುದನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅಜಿರ್ಯನ್ನು ವಿಚಾರಣೆ ನಡೆಸಲು ನಿರಾಕರಿಸಿದೆ.
ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡುತ್ತಿರುವುದರಿಂದ ಸಂವಿಧಾನದ ವಿಧಿ 164(1)ರ ಉಲ್ಲಂಘನೆಯಾಗಿದೆ. ಹಾಗೆಯೇ ಅಧಿಕ ವೇತನ-ಭತ್ಯೆ ನೀಡುತ್ತಿರುವುದರಿಂದ ಸಾರ್ವಜನಿಕ ಹಣ ಅನಗತ್ಯವಾಗಿ ಪೋಲಾಗುತ್ತಿದೆ. ಅವರಿಗೆ ಈ ಸ್ಥಾನಮಾನ ನೀಡದಂತೆ ನಿರ್ದೇಶಿಸಬೇಕು ಎಂದು ವಕೀಲ ಕೆ.ಬಿ.ವಿಜಯಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅಜಿರ್ದಾರ ವಕೀಲರ ವಾದ ಆಲಿಸಿದ ಪೀಠ, ರಾಜ್ಯಪಾಲರಿಂದ ಅಧಿಕಾರ ಗೌಪ್ಯತೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದವರನ್ನು ಮಾತ್ರ ಸಚಿವರಾಗಿ ಪರಿಗಣಿಸಲಾಗುತ್ತದೆ. ಇಂತಹ ಸಚಿವರಿಗೆ ಇರುವ ಅಧಿಕಾರಗಳು ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಇರುವುದಿಲ್ಲ. ಕೇವಲ ಸಚಿವರಿಗೆ ನೀಡಲಾಗುವ ವೇತನ-ಭತ್ಯೆಗಳನ್ನು ನೀಡಿದಾಕ್ಷಣ ನಿಗಮ ಮಂಡಳಿಗಳ ಅಧ್ಯಕ್ಷರನ್ನು ಸಚಿವರಂತೆ ಅಥವಾ ಅವರಿಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಸಚಿವರ ಸಂಖ್ಯೆ ವಿಧಾನಸಭೆಯ ಒಟ್ಟು ಸಂಖ್ಯಾಬಲದ ಶೇ. 15ರಷ್ಟು ಮೀರಬಾರದು ಎಂದು ಸಂವಿಧಾನದ ಪರಿಚ್ಛೇದ 164 (1) ಎ) ಹೇಳುತ್ತದೆ. ಅದರಂತೆ ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು 225 ಸದಸ್ಯರಿದ್ದು, 34 ಮಂದಿ ಸಚಿವರಾಗಬಹುದು. ಪ್ರಸ್ತುತ ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿರುವುದರಿಂದ ಈ ಸಂಖ್ಯೆ 52 ಆಗಿದೆ. ಆದರೆ ನಿಗಮ-ಮಂಡಳಿಗಳ ಅಧ್ಯಕ್ಷರು ಸಚಿವರಲ್ಲ. ಸರ್ಕಾರದಲ್ಲಿರುವ ಸಚಿವರ ಸಂಖ್ಯೆ ಶೇ. 15ರಷ್ಟನ್ನು ಮೀರಿಲ್ಲ. ಹೀಗಾಗಿ ಸಂವಿಧಾನದ ವಿಧಿ 164 (1) (ಎ) ನಿಯಮದ ಉಲ್ಲಂಘನೆಯಾಗಿಲ್ಲ.
ಇನ್ನು ಕ್ಯಾಬಿನೆಟ್ ದರ್ಜೆಯ ವೇತನ-ಭತ್ಯೆ ನೀಡುತ್ತಿರುವುದು ಸರಿಯಲ್ಲ ಅಥವಾ ಕಾನೂನು ಬಾಹಿರ ಎಂಬುದನ್ನು ಸಾಬೀತು ಮಾಡುವ ಅಂಶಗಳನ್ನು ಅರ್ಜಿದಾರರು ನೀಡಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿ ವಿಚಾರಣೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಇತ್ಯರ್ಥಪಡಿಸಿತು.