ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಉಂಟಾಗಿರುವ ತೀವ್ರ ಸಂಕಷ್ಟ ಕರ್ನಾಟಕದ ಜಿಡಿಪಿಯನ್ನು ಗಣನೀಯವಾಗಿ ಕುಗ್ಗಿಸುವ ಆತಂಕವನ್ನು ಸೃಷ್ಟಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಜಿಡಿಪಿ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಕುಚಿತವಾಗುವ ಆತಂಕ ಎದುರಾಗಿದೆ.
ಕೊರೊನಾ ಮತ್ತು ಅದು ಹೇರಿದ ಲಾಕ್‌ಡೌನ್ ದೇಶದ ಆರ್ಥಿಕತೆಯನ್ನೇ ಬುಡಮೇಲಾಗಿಸಿದೆ. ಅದಕ್ಕೆ ನಮ್ಮ ರಾಜ್ಯವೂ ಹೊರತಾಗಿಲ್ಲ. ರಾಜ್ಯ ಹಿಂದೆಂದೂ ಕಂಡರಿಯದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇದರ ಫಲವಾಗಿ ಕರ್ನಾಟಕದ ಜಿಡಿಪಿ ಭಾರೀ ಪ್ರಮಾಣದ ಕುಸಿತ ಕಾಣುವ ಭೀತಿ ಎದುರಾಗಿದೆ. ಸದ್ಯ ರಾಜ್ಯದ ಜಿಡಿಪಿ 18 ಲಕ್ಷ ಕೋಟಿ ರೂ. ಇದೆ. ಈ ಜಿಡಿಪಿ ಪ್ರಮಾಣ ಭಾರೀ ಕುಸಿತ ಕಾಣುವ ಆತಂಕವನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜಿಡಿಪಿ ಮೇಲಿನ ಹೊಡೆತ ಹೇಗಿದೆ?:
ಕರ್ನಾಟಕದ ಜಿಡಿಪಿ 18 ಲಕ್ಷ ಕೋಟಿ ರೂ. ಇದೆ. ಲಾಕ್ಡೌನ್ನಿಂದ ರಾಜ್ಯದ ಆದಾಯ ಬರಿದಾಗಿದೆ. ಬಹುತೇಕ ಎಲ್ಲಾ ವಲಯಗಳ ಚಟುವಟಿಕೆ ಹಿಂಜರಿಕೆ ಕಂಡಿದೆ. ಹೀಗಾಗಿ ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಜಿಡಿಪಿ ಸುಮಾರು 3 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಕುಗ್ಗುವ ಸಾಧ್ಯತೆ ಇದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಡಿಪಿ ಇಳಿಕೆ ರಾಜ್ಯದ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈಗಾಗಲೇ ರಾಜ್ಯದ ಪಾಲಿನ ಜಿಎಸ್ಟಿ ಪರಿಹಾರ ಮೊತ್ತ ಗಣನೀಯ ಕುಸಿತ ಕಂಡಿದೆ. ಅದರ ಜೊತೆಗೆ ರಾಜ್ಯಕ್ಕೆ ಬರಬೇಕಾದ ಕೇಂದ್ರದ ತೆರಿಗೆ ಹಣದ ಪ್ರಮಾಣವೂ ಕಡಿತವಾಗಿದೆ.
ಕರ್ನಾಟಕ 2020-21 ಸಾಲಿನಲ್ಲಿ 6.3%ರ ಆರ್ಥಿಕ ಪ್ರಗತಿ ದರವನ್ನು ನಿರೀಕ್ಷಿಸಿತ್ತು. ಆದರೆ ಆರ್ಥಿಕ ಸಂಕಷ್ಟದ ಹಿನ್ನೆಲೆ ಆ ಪ್ರಗತಿ ಅಸಾಧ್ಯವಾಗಿದೆ. ರಾಜ್ಯ ಜಿಡಿಪಿ ಕುಸಿಯುತ್ತಿರುವ ಕಾರಣ ಹೆಚ್ಚುವರಿ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಇದರಿಂದ ರಾಜ್ಯದ ಸಾಲ ಪ್ರಮಾಣ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ನಿಗದಿ ಪಡಿಸಿರುವ ರಾಜ್ಯ ಜಿಡಿಪಿಯ 25% ಮಿತಿಯ ಸನಿಹಕ್ಕೆ ಹೋಗುವ ಭೀತಿ ಎದುರಾಗಿದೆ.
2020-21 ಸಾಲಿನಲ್ಲಿ ಕರ್ನಾಟಕದ ಹೊಣೆಗಾರಿಕೆ 3.68 ಲಕ್ಷ ಕೋಟಿ ರೂ. ತಲುಪುವ ಅಂದಾಜು ಮಾಡಲಾಗಿತ್ತು. ಅಂದರೆ ಅದು ರಾಜ್ಯದ ಜಿಡಿಪಿಯ 20.42% ಆಗಿದೆ. ರಾಜ್ಯದ ಜಿಡಿಪಿ ಕುಸಿತ ಕಾಣುತ್ತಿರುವ ಹಿನ್ನೆಲೆ ಹೊಣೆಗಾರಿಕೆ ಇನ್ನಷ್ಟು ಹೆಚ್ಚುವುದು ಖಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ರಾಜ್ಯದ ಜಿಡಿಪಿ 17%ರ ಕುಸಿತ ಕಂಡರೆ, ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆ 24.5% ತಲುಪುವ ಸಾಧ್ಯತೆ ಇದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಈ ಸಂಬಂಧ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಆದಾಯ ಕೊರತೆಯನ್ನು ನೀಗಿಸಲು ಹೆಚ್ಚುವರಿ ಸಾಲದ ಮೊರೆ ಹೋದರೆ ಒಟ್ಟು ಹೊಣೆಗಾರಿಕೆಯು ರಾಜ್ಯ ಜಿಡಿಪಿಯ 25% ಮಿತಿಯನ್ನೂ ಮೀರುವ ಸಾಧ್ಯತೆ ಹೆಚ್ಚಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಆರ್ಥಿಕ ತಜ್ಞರು ಹೇಳುವ ಪ್ರಕಾರ ದೇಶದ ಜಿಡಿಪಿ ಐತಿಹಾಸಿಕ ಕುಸಿತ ಕಂಡಿದೆ. ಅದರಂತೆ ರಾಜ್ಯದ ಜಿಡಿಪಿಯೂ ಕುಸಿತ ಕಾಣಲಿದೆ. ರಾಜ್ಯದ ಆರ್ಥಿಕತೆ ಸಹಜ ಸ್ಥಿತಿಗೆ ಬರಲು ಇನ್ನೂ ಕನಿಷ್ಠ ಆರು ತಿಂಗಳಿಂದ ಒಂದು ವರ್ಷ ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಎರಡು ಮೂರು ತ್ರೈಮಾಸಿಕಗಳಲ್ಲಿ ರಾಜ್ಯದ ಜಿಡಿಪಿಯೂ ಕುಸಿತದ ಹಾದಿಯಲ್ಲೆ ಇರಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.