ಬೆಂಗಳೂರು: ನೆರೆ ಪರಿಹಾರವಾಗಿ ರಾಜ್ಯ ಸರ್ಕಾರ ಇದುವರೆಗೂ 2941 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ನೆರೆ ಸಂಬಂಧ ನಡೆದ ಚರ್ಚೆಯಲ್ಲಿ ಮಾತನಾಡಿದ ಅಶೋಕ್, ಸಾಲವಾದರೂ ಪರವಾಗಿಲ್ಲ, ನೊಂದವರ ಪರ ನಾವಿರುತ್ತೇವೆ. ಜನ ಆತಂಕ ಪಡುವ ಅಗತ್ಯವಿಲ್ಲ. ಎಷ್ಟೇ ಮೊತ್ತ ಕೇಂದ್ರ ಸರ್ಕಾರ ನೀಡಲಿ. ಪರಿಹಾರ ಕಾರ್ಯದಲ್ಲಿ ಕೊರತೆ ಆಗದಂತೆ ನಾವು ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದರು.
ಶೇ. 229ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಕೃಷ್ಣಾ, ಭೀಮಾ ನದಿಯಿಂದ ನೀರು ಎರಡು-ಮೂರು ಪಟ್ಟು ಹೆಚ್ಚುವರಿ ನೀರು ಹರಿದು 22 ಜಿಲ್ಲೆ, 103 ತಾಲೂಕು, 2898 ಗ್ರಾಮಗಳಿಗೆ ಹಾನಿಯಾಗಿದೆ ಎಂದು ವಿವರಿಸಿದರು. ಇನ್ನು 5 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 1 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆ, 200 ಹೆಕ್ಟೇರ್ ಕಾಫಿ ತೋಟ ಹಾಳಾಗಿದೆ. 2.47 ಲಕ್ಷ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. 237 ಗೋಶಾಲೆ ಸ್ಥಾಪನೆ ಆಗಿದೆ. 45616 ಜಾನುವಾರುಗಳು ಅಸುನೀಗಿವೆ. ಅಲ್ಲದೇ, 21818 ಕಿ.ಮೀ. ರಸ್ತೆ ಹಾಳಾಗಿದೆ. 6190 ಕೀ.ಮೀ. ರಾಜ್ಯ ಹೆದ್ದಾರಿಗಳು, 2778 ಕಿ.ಮೀ. ನಗರ ರಸ್ತೆಗಳು, 2900 ಸೇತುವೆ ನಾಶವಾಗಿವೆ. 1500 ಕೆರೆಗಳು ಹಾನಿಗೀಡಾಗಿದ್ದು, ಸಮರ್ಪಕವಾಗಿ ಸುರಕ್ಷತೆಗೆ ದೊಡ್ಡ ಮಟ್ಟದಲ್ಲಿ ತಂಡ ರಚನೆ ಮಾಡಿದ್ದೇವೆ. ಅಗ್ನಿಶಾಮಕ ದಳದ 50 ತಂಡ, ವಾಯುಪಡೆಯ 4 ಹೆಲಿಕಾಪ್ಟರ್, 17 ತಂಡ ಭೂ ಸೇನೆ, ಜಲಸೇನೆ ತುಕಡಿ ಬಳಸಿ 7 ಲಕ್ಷ ಜನರನ್ನು ರಕ್ಷಿಸಿದ್ದೇವೆ ಎಂದು ವಿವರಿಸಿದರು.
4 ಲಕ್ಷಕ್ಕೂ ಅಧಿಕ ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. 4415 ವೈದ್ಯಕೀಯ ಆರೋಗ್ಯ ಶಿಬಿರ ಮಾಡಿದ್ದೇವೆ. 10600 ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ. ಇಷ್ಟು ಪ್ರಯತ್ನದ ಹೊರತಾಗಿಯೂ 91 ಮಂದಿ ಅಸುನೀಗಿದ್ದಾರೆ. ಮಡಿಕೇರಿ ಭಾಗದಲ್ಲಿ 10 ಮಂದಿ ಮಣ್ಣಲ್ಲಿ ಹೂತು ಹೋಗಿದ್ದರು. ನಾಲ್ವರ ಶವ ಸಿಕ್ಕಿಲ್ಲ. ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ್ದೇವೆ. ನಿರಾಶ್ರಿತರಿಗೆ ಆಹಾರ ಸಾಮಗ್ರಿ ಕೊಟ್ಟಿದ್ದೇವೆ. ಜಾನುವಾರು ಕಳೆದುಕೊಂಡವರಿಗೆ 617 ಲಕ್ಷ ರೂ. ಪರಿಹಾರ ನೀಡಿದ್ದೇವೆ. 30 ಸಾವಿರ ರೂ.ವರೆಗೂ ಪರಿಹಾರ ನೀಡಲಾಗಿದೆ. 2.03 ಲಕ್ಷ ಕುಟುಂಬಗಳಿಗೆ ತಲಾ 10 ಸಾವಿರ ರೂ. ಆರ್ಟಿಜಿಎಸ್ ಮೂಲಕ ನೀಡಲಾಗಿದೆ ಎಂದರು.
ಈ ವೇಳೆ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಲಾಯಿತು. ಜೊತೆಗೆ ಜಾನುವಾರುಗಳ ಸಾವಿನ ಕುರಿತು ಪ್ರಸ್ತಾಪಿಸಲಾಯಿತು. ಅಷ್ಟೇ ಅಲ್ಲದೇ ನೆರೆ ಪರಿಹಾರ ವಿಚಾರದಲ್ಲಿ ಅವ್ಯವಹಾರ ಆದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಎಲ್ಲರ ಸಕಾರಾತ್ಮಕ ಸಲಹೆ, ಸೂಚನೆ ಸ್ವೀಕರಿಸುತ್ತೇವೆ. ಟೀಕೆಯನ್ನೂ ಸ್ವೀಕರಿಸುತ್ತೇವೆ. ಎರಡು ದಿನದ ಚರ್ಚೆ ಸಾಕಷ್ಟು ಮಾಹಿತಿ ನೀಡಿದೆ. ಜನರಿಗೆ ಹಣ ತಲುಪದಿದ್ದರೆ ತಿಳಿಸಿ ತಕ್ಷಣಕ್ಕೆ ಸ್ಪಂದಿಸುತ್ತೇವೆ ಎಂದರು. ಇನ್ನು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಅಧಿಕಾರಿಗಳು ಸಾಕಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ. ಪರಿಹಾರ ಬೇಗ ಹಾಗೂ ಪಾರದರ್ಶಕವಾಗಿ ವಿತರಣೆ ಮಾಡುವಂತಾಗಲಿ ಎಂದು ಸಲಹೆ ಇತ್ತರು.