ಬೆಂಗಳೂರು: ರಾಜ್ಯ ಸರ್ಕಾರ ತನ್ನ ಸಚಿವ ಸಂಪುಟದಲ್ಲಿ 3667 ಎಕರೆ ಭೂಮಿಯನ್ನು ಅನುಮೋದನೆ ನೀಡಿತ್ತು. ಇದರ ಮರು ಪರಿಶೀಲನೆಗೆ ಈಗಾಗಲೇ ಉಪ ಸಮಿತಿಯನ್ನು ರಚಿಸಿದ್ದಾರೆ. ಈ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭೂಮಿಗೆ ಅನುಮೋದನೆ ನೀಡಿದ ನಂತರ ಸಿಎಂ ಹಾಗೂ ಕೈಗಾರಿಕಾ ಸಚಿವರಿಗೆ ಪತ್ರ ಬರೆದಿದ್ದೇನೆ. ಜಿಂದಾಲ್ ವಿಚಾರವನ್ನು ಪರಿಗಣಿಸಬಾರದು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಎಂಎಂಎಲ್ ಆಗಲಿ ಸರ್ಕಾರದಲ್ಲಾಗಲಿ ಜಿಂದಾಲ್‌ಗೆ ಸಂಬಂಧಿಸಿದ ಯಾವುದೇ ಪತ್ರಗಳು ಸಿಗುತ್ತಿಲ್ಲ. ಜಿಂದಾಲ್ನಲ್ಲಿ ಯಾರು ಎಷ್ಟು ಭೂಮಿ ತೆಗೆದುಕೊಂಡಿದ್ದಾರೆ, ಅದರ ಲ್ಯಾಂಡ್ ಆಡಿಟ್ನ ಮಾಡಿಸಬೇಕು. ಉಪಸಮಿತಿ ಬೇಗ ಭೂಮಿಯ ಲೆಕ್ಕ ಪರಿಶೋಧನೆ ಮಾಡಿಸಬೇಕು. ಜಿಂದಾಲ್ ವಿಚಾರದಲ್ಲಿ ಉಪಸಮಿತಿಯಲ್ಲಿ ಈ ಬಗ್ಗೆ ಆದಷ್ಟು ಬೇಗ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಮೊನ್ನೆ ಕೆಪಿಸಿಸಿ ಸಭೆ ನಡೆದಿದೆ. ಅಲ್ಲಿ ಹಲವಾರು ಹಿರಿಯರು ಭಾಗವಹಿಸಿದ್ರು . ಅವರವರ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಯಾವುದೇ ಅಸಮಾಧಾನದ ಮಾತುಗಳು ಇಲ್ಲ. ನಾವು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಕೆಲಸ ಮಾತ್ರ ನಮ್ಮದು, ಮೋದಿಗೆ ವೋಟ್ ಹಾಕುತ್ತೀರಾ ಎಂಬ ಸಿಎಂ ಹೆಚ್‌ಡಿಕೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಾತುಗಳನ್ನ ಸಮರ್ಥಿಸಿದ ಹೆಚ್ ಕೆ ಪಾಟೀಲ್, ಯಾರು ಗೆದ್ದರೂ ಕೂಡ ಕೆಲಸ ಮಾಡಬೇಕು. ನಾವು ಇಷ್ಟೆಲ್ಲಾ ಕೆಲಸ ಮಾಡಿದರೂ ಹಿನ್ನೆಡೆಯಾಗಿದ್ದರಿಂದ ಮಾತನಾಡಿದ್ದಾರೆ. ಸ್ವಲ್ಪ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿದ್ದಾರೆ, ಅದರಲ್ಲಿ ತಪ್ಪೇನೂ ಇಲ್ಲ ಎಂದರು.