ಬೆಂಗಳೂರು: ಸ್ಪೀಕರ್ ಮಟ್ಟದಲ್ಲೇ ಅನರ್ಹತೆಯ ವಿಚಾರ ಇತ್ಯರ್ಥವಾಗಬೇಕಿದ್ದು, ಈ ಸಂಬಂಧ ಸ್ಪೀಕರ್ಗೆ ಸಂಪೂರ್ಣ ಅಧಿಕಾರ ಇರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಕ್ಷಾಂತರ ಕಾಯ್ದೆ ಸಂಬಂಧ ಸ್ಪೀಕರ್ ಜೊತೆಗಿನ ಸಭೆ ಬಳಿಕ ಮಾತನಾಡಿದ ಅವರು, ಮೂರು ತಿಂಗಳ ಒಳಗೆ ಅನರ್ಹತೆಯ ಪ್ರಕರಣ ಇತ್ಯರ್ಥವಾಗಬೇಕು. ರಾಜೀನಾಮೆ ಕೊಟ್ರೆ ಅವರ ನಡವಳಿಕೆ ನೋಡಿ ತೀರ್ಮಾನ ಮಾಡಬೇಕು. ರಾಜೀನಾಮೆ ಅಂಗೀಕಾರದ ಬಗ್ಗೆ ಅವರ ಮನಸ್ಥಿತಿ, ನಡವಳಿಕೆ ನೋಡಿ ನಿರ್ಧಾರ ಮಾಡಬೇಕು ಎಂದು ಸ್ಪೀಕರ್ಗೆ ಅಭಿಪ್ರಾಯ ನೀಡಿದ್ದೇನೆ ಎಂದರು.
ಇಂದಿನ ಸಭೆಯಲ್ಲಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಯಾರೇ ಪಕ್ಷಾಂತರಿಗಳು ಆದರೂ ಎರಡು ಬಾರಿ ಎಲೆಕ್ಸನ್ಗೆ ನಿಲ್ಲಬಾರದು. ಅವರಿಗೆ ಅಧಿಕಾರ ಕೊಡಬಾರದು, ಪಕ್ಷಾಂತರ ವಿಷಯದಲ್ಲಿ ಸ್ಪೀಕರ್ ನಿರ್ಣಯವೇ ಅಂತಿಮವಾಗಬೇಕು. ಈ ವಿಷಯದಲ್ಲಿ ಸ್ಪೀಕರ್ಗೆ ಸಂಪೂರ್ಣ ಅಧಿಕಾರ ಕೊಡಬೇಕು. ಜೊತೆಗೆ ಇಂತ ಕೇಸ್ಗಳು ಮೂರು ತಿಂಗಳ ಒಳಗೆ ಇತ್ಯರ್ಥ ಆಗಬೇಕು. 10ನೇ ಷೆಡ್ಯೂಲ್ನಲ್ಲಿ ಸ್ಪೀಕರ್ ತೀರ್ಪೇ ಅಂತಿಮವಾಗಿ ಆಗಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ವಿವರಿಸಿದರು.
ಈ ಪಕ್ಷಾಂತರಿಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರಗಳನ್ನೇ ಬೀಳಿಸಿ ಬಿಟ್ಟಿದ್ದಾರೆ. ಈ ರೀತಿ ಆದರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತೆ? ಯಾವುದೇ ಅಧಿಕಾರವನ್ನು ಅವರಿಗೆ ಕೊಡಬಾರದು. ಮೂರನೇ ಜಡ್ಜಮೆಂಟ್ಗೆ ಇದನ್ನು ಹೋಗಲು ಬಿಡಬಾರದು. ಈ ವಿಷಯಗಳನ್ನು ಸ್ಪೀಕರ್ಗೆ ನಾವು ತಿಳಿಸಿದ್ದೇವೆ. ಬೇರೆಯವರು ಕೂಡ ಅವರವರ ಅಭಿಪ್ರಾಯ ತಿಳಿಸಿದ್ದಾರೆ ಎಂದು ವಿವರಿಸಿದರು.