ಬೆಂಗಳೂರು: ವಿಧಾನಪರಿಷತ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಒಟ್ಟಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಅಭ್ಯರ್ಥಿ ಆಯ್ಕೆ ಸಂಬಂಧ ಅಧ್ಯಕ್ಷರು, ಸಿಎಲ್ಪಿ ಲೀಡರ್ ಜೊತೆ ಚರ್ಚೆ ಮಾಡಿರ್ತಾರೆ. ಅವರಿಗೆ ಅದರ ಬಗ್ಗೆ ಗೊತ್ತಿರುತ್ತೆ. ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಅವರು ನಿರ್ಧಾರ ತೆಗೆದುಕೊಳ್ತಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಎಸ್.ಆರ್. ಪಾಟೀಲ್ ಆಯ್ಕೆಗೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಮಾಡುವ ಬಗ್ಗೆ ಪ್ರಶ್ನೆ ಉದ್ಭವಿಸಲ್ಲ. ಸಭೆಗೆ ನನ್ನನ್ನ ಕರೆದು ಚರ್ಚೆಯನ್ನೂ ಮಾಡಿಲ್ಲ. ನಾನು ಪರವೂ ಇಲ್ಲ, ವಿರೋಧವೂ ಇಲ್ಲ. ನಾನ್ಯಾಕೆ ಅವರನ್ನ ವಿರೋಧ ಮಾಡಲಿ ಎಂದರು.
ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಸೇರಿಸುವ ವಿಚಾರವಾಗಿ ಮಾತನಾಡಿದ ಎಂ ಬಿ ಪಾಟೀಲ್ ಅವರು, ನಾರಾಯಣಗುರು, ಬಸವಣ್ಣ ಆದರ್ಶಪ್ರಾಯರು. ಮುಂದಿನ ಪೀಳಿಗೆಗೆ ತತ್ವಗಳ ಮೌಲ್ಯ ತಿಳಿಸಬೇಕು. ಪಠ್ಯದಲ್ಲಿ ಆರ್ಎಸ್ಎಸ್ ತತ್ವ ಸೇರಿಸೋದು ಸರಿಯಲ್ಲ. ನಾರಾಯಣಗುರು, ಪೆರಿಯಾರ್, ಭಗತ್ ಸಿಂಗ್ ಪಠ್ಯ ಇರಲಿ. ಅವರ ತತ್ವಗಳನ್ನ ಮಕ್ಕಳಿಗೆ ತಿಳಿಸಲಿ. ಈ ರೀತಿ ಆರ್ಎಸ್ಎಸ್ ಸಿದ್ಧಾಂತ ಹೇರೋದು ಸರಿಯಲ್ಲ. ಬಿಜೆಪಿಯವರು ಇದನ್ನೇ ಮಾಡ್ತಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಸಮನ್ಸ್.. ವಿಚಾರಣೆಗೆ ಹಾಜರಾಗಲು ಸೂಚನೆ
ಪರಿಷತ್ ಟಿಕೆಟ್ ಆಯ್ಕೆಯಲ್ಲಿ ಗೊಂದಲ ಇರುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನೂ ಆಗಿಲ್ಲಪ್ಪ, ಹೋಗಿ ಹೇಳಿ ಬಂದಿದ್ದೇವೆ. ಡಿಕೆಶಿ ದೆಹಲಿ ಪ್ರವಾಸದ ವಿಚಾರ ಕೇಳಿದ್ದಕ್ಕೆ, ನನಗೆ ಅದರ ಬಗ್ಗೆ ಮಾಹಿತಿಯಿಲ್ಲ ಎಂದರು.
ಸಿದ್ದರಾಮಯ್ಯ ನಿವಾಸದ ಬಳಿ ಪಿಎಸ್ಐ ಅಭ್ಯರ್ಥಿಗಳ ದಂಡು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಇಂದು ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಆಗಮಿಸಿ, ತಮ್ಮ ಅಹವಾಲು ತೋಡಿಕೊಂಡರು. ಪ್ರಾಮಾಣಿಕವಾಗಿ ಬರೆದು ಪಾಸಾಗಿದ್ದೇವೆ. ನಮಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡರು. ಈ ವೇಳೆ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ತೆರಳಿದರು.
ಶಾಸಕರ ಭೇಟಿ: ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದರು. ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿ ಕೆಲ ಸಮಯ ಕಾದು ಅವರನ್ನು ಭೇಟಿಯಾಗಿ ವಾಪಸ್ ತೆರಳಿದರು. ಆದ್ರೆ ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ ಕಾರಣವನ್ನು ಮಾಧ್ಯಮಗಳಿಗೆ ತಿಳಿಸಲಿಲ್ಲ.