ಬೆಂಗಳೂರು: ಸಂವಿಧಾನದ ವಿಧಿ 21ರಲ್ಲಿ ಹೇಳಿರುವ ಜೀವಿಸುವ ಹಕ್ಕು ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಅನ್ವಯಿಸುತ್ತದೆ. ಹೀಗಾಗಿ, ತಳಿ ಸಂವರ್ಧನೆ ಹೆಸರಲ್ಲಿ ಶ್ವಾನಗಳನ್ನು ಹಿಂಸಿಸುವುದು ಈ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ತಳಿ ಸಂವರ್ಧನಾ ಕೇಂದ್ರದಲ್ಲಿ ನಾಯಿಗಳನ್ನು ಹಿಂಸಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಂಪ್ಯಾಷನ್ ಅನ್ ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಎನ್ಜಿಒ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ, ನಾಯಿಗಳಿಗೂ ಜೀವಿಸುವ ಹಕ್ಕಿದೆ. ಸಂವಿಧಾನದ ವಿಧಿ 21ರಲ್ಲಿ ಹೇಳಿರುವಂತೆ ಉತ್ತಮ ಹಾಗೂ ಆರೋಗ್ಯಕರ ಪರಿಸರದಲ್ಲಿ ಬದುಕುವ ಹಕ್ಕು ಮನುಷ್ಯರಿಗಷ್ಟೇ ಅಲ್ಲ. ಪ್ರಾಣಿಗಳಿಗೂ ಅನ್ವಯಿಸುತ್ತದೆ. ಹಾಗೆಯೇ, ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ ಕೂಡ ಮನುಷ್ಯರಿಂದ ಪ್ರಾಣಿಗಳು ಅನಗತ್ಯ ಹಿಂಸೆ, ಕಿರುಕುಳಕ್ಕೆ ಒಳಗಾಗಬಾರದು, ಪ್ರಾಣಿಗಳು ಸುರಕ್ಷಿತವಾಗಿರಬೇಕು ಎಂದು ಹೇಳುತ್ತದೆ ಎಂದು ಹೇಳಿತು.
ತಳಿ ಸಂವರ್ಧನೆ ಹೆಸರಲ್ಲಿ ಶ್ವಾನಗಳನ್ನು ಕೀಳಾಗಿ ನಡೆಸಿಕೊಳ್ಳುವುದು, ಕೆಟ್ಟ ಅಥವಾ ಅನಾರೋಗ್ಯಕರ ಪ್ರದೇಶದಲ್ಲಿ ಇರಿಸುವುದು, ಸೂಕ್ತ ಆಹಾರ-ನೀರು ಕೊಡದಿರುವುದು, ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ಕೊಡಿಸದಿರುವುದು ಕ್ರೌರ್ಯ ಎನ್ನಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೇ, ನಾಯಿಗಳನ್ನು ತಳಿಸಂವರ್ಧನಾ ಕೇಂದ್ರದ ಮಾಲಿಕನಿಗೆ ಹಿಂದಿರುಗಿಸುವಂತೆ ಕ್ಯೂಪಾಗೆ ನಿರ್ದೇಶಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ - ಬೆಂಗಳೂರಿನ ಜೆಪಿ ನಗರದ ಶ್ರೇಯಸ್ ಎಂಬುವರು ಪರವಾನಿಗೆ ಇಲ್ಲದೆ ನಾಯಿ ತಳಿ ಸಂವರ್ಧನಾ ಕೇಂದ್ರ ಹೊಂದಿದ್ದು, ಅಲ್ಲಿರುವ ನಾಯಿ ಹಾಗೂ ಮರಿಗಳನ್ನು ಹಿಂಸಿಸುತ್ತಿದ್ದಾರೆ. ವಾಸಯೋಗ್ಯವಲ್ಲದ ಜಾಗದಲ್ಲಿ ನಾಯಿಗಳನ್ನು ಕೂಡಿಹಾಕಿದ್ದು, ಸೂಕ್ತ ಆಹಾರ, ನೀರು ಕೊಡುತ್ತಿಲ್ಲ. ಕಚ್ಚಾಡಿಕೊಂಡ ನಾಯಿಗಳಿಗೆ ಚಿಕಿತ್ಸೆ ಕೊಡಿಸುತ್ತಿಲ್ಲ. ಇದರಿಂದಾಗಿ ಕೇಂದ್ರದಲ್ಲಿರುವ ನಾಯಿಗಳು ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದು, ಅವುಗಳಿಗೆ ಚಿಕಿತ್ಸೆ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆ.ಬಿ. ಹರೀಶ್ ಎಂಬುವರು 2020ರ ಸೆ.19ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು 10 ನಾಯಿಗಳನ್ನು ವಶಕ್ಕೆ ಪಡೆದು, ನಿರ್ವಹಣೆಗಾಗಿ ಕ್ಯೂಪಾಗೆ ಹಸ್ತಾಂತರಿಸಿದ್ದರು. ನಾಯಿಗಳನ್ನು ಸುಪರ್ದಿಗೆ ಪಡೆದಿದ್ದ ಕ್ಯೂಪಾ ಅವುಗಳ ಚಿಕಿತ್ಸೆಗೆ 50 ಸಾವಿರ ಹಣ ಕೊಡಿಸುವಂತೆ ನಗರದ 30ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಹಾಕಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ನಾಯಿಗಳನ್ನು ಮಾಲೀಕನಿಗೆ ಹಿಂದಿರುಗಿಸುವಂತೆ ಆದೇಶಿಸಿ, ಮನವಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಕ್ಯೂಪಾ ಹೈಕೋರ್ಟ್ ಮೆಟ್ಟಿಲೇರಿತ್ತು.