ಬೆಂಗಳೂರು : ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರ ತಲುಪಿದೆ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರ ಆಡಳಿತ ಕಚೇರಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸ್ಪೀಕರ್ ಅವರ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಆನಂದ್ ಸಿಂಗ್ ವಿಜಯನಗರ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಪತ್ರ ಕಚೇರಿಗೆ ತಲುಪಿದೆ ಎಂದು ಮಾಹಿತಿ ನೀಡಲಾಗಿದೆ.
ಆನಂದ ಸಿಂಗ್ ರಾಜೀನಾಮೆ ಬಗ್ಗೆ ಕಾನೂನು ಪ್ರಕಾರ ಪರಿಶೀಲಿಸಿ ತೀರ್ಮಾನ ತಗೆದುಕೊಳ್ಳಲಾಗುವುದು ಸ್ಪೀಕರ್ ಕಚೇರಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ಶಾಸಕ ಆನಂದ್ ಸಿಂಗ್ ರಾಜೀನಾಮೆ ಪತ್ರವನ್ನು ತಮಗೆ ನೀಡಿಲ್ಲವೆಂದು ಸ್ಪೀಕರ್ ರಮೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದರು.
ಈ ನಡುವೆ ಆನಂದ್ ಸಿಂಗ್ ತಾವು ರಾಜೀನಾಮೆ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡಿರುವುದಾಗಿ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರ ಸಿಕ್ಕಿಲ್ಲ ಎಂದಾದರೆ ಮತ್ತೊಮ್ಮೆ ನೀಡುವುದಾಗಿಯೂ ಹೇಳಿದ್ದಾರೆ.