ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಹಾಗೂ ಮಹದೇವಪುರ ಕ್ಷೇತ್ರದ ಮಧ್ಯೆ ಇರುವ ರಾಂಪುರ ಕೆರೆಯು ಕಸ-ಕೊಳಚೆಯಿಂದ ತುಂಬಿ ದುರ್ನಾಥ ಬೀರುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜಾವಬ್ದಾರಿತನದಿಂದ ಅವನತಿಯ ಅಂಚು ತಲುಪುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಸುಮಾರು 100 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ರಾಂಪುರ ಕೆರೆಯಲ್ಲಿ ಕೊಳಚೆ ಒಳಚರಂಡಿ ನೀರು ಮತ್ತು ಜೋಡು ತುಂಬಿದ್ದು ದುರ್ವಾಸನೆ ಬೀರುತ್ತಿದೆ. ಅಷ್ಟೇ ಅಲ್ಲದೆ ಕೆರೆಯ ಪಕ್ಕದ ರಸ್ತೆ ಕೂಡ ಕಸದಿಂದ ತುಂಬಿ ಹೋಗಿದ್ದು, ಆ ದಾರಿಯಲ್ಲಿ ಜನರು ಒಡಾಡದಂತಹ ಪರಿಸ್ಥತಿ ನಿರ್ಮಾಣವಾಗುತ್ತಿದೆ.
ಕಲುಷಿತ ಕೆರೆ ಪಕ್ಕದಲ್ಲೇ ಇರುವುದರಿಂದ ಸ್ಥಳೀಯ ನಿವಾಸಿಗಳಿಗೆ ಡೆಂಗ್ಯೂ ಮತ್ತು ಮಲೇರಿಯಾ ಹರಡುವ ಭೀತಿಯೂ ಹೆಚ್ಚಾಗಿದೆ. ಈ ಕೆರೆಯ ಪಕ್ಕದ ಕೆ.ಚನ್ನಸಂದ್ರ ಮಾರ್ಗ ಬಿಲೇಶಿವಾಲೆ, ಬೈರತಿ, ರಾಂಪುರ, ಹೋಸಕೋಟೆ ಸೇರುವ ಮುಖ್ಯ ರಸ್ತೆಯ ಮಾರ್ಗವಾಗಿದೆ. ಆದರೆ ರಾತ್ರಿ 11 ಗಂಟೆಯ ನಂತರ ಹಲವಾರು ಲಾರಿಗಳು ಬಂದು ತ್ಯಾಜ್ಯವನ್ನು ಕೆರೆಗೆ ಡಂಪ್ ಮಾಡುತ್ತವೆ. ಸ್ಥಳೀಯ ಮಾಂಸದ ಅಂಗಡಿಯವರು ಕೋಳಿ ಮಾಂಸದ ಮೂಟೆಗಟಲೆ ತ್ಯಾಜ್ಯವನ್ನು ತಂದು ಕೆರೆಗೆ ಸುರಿಯುತ್ತಿದ್ದಾರೆ. ಆದರೆ ಇವ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೆರೆಯನ್ನು ಸ್ವಚ್ಛಗೊಳಿಸಿ, ಮುಂದೆ ಯಾರೂ ಇಲ್ಲಿಗೆ ಕಸ ಹಾಕದಂತೆ ಜಾಗೃತಿ ವಹಿಸಿ ಆ ಮೂಲಕ ಸ್ಥಳೀಯ ರೈತರಿಗೆ ಕೃಷಿ ನಿರ್ವಹಿಸಲು ನೆರವಾಗಬೇಕು ಎಂದು ರೈತರು ಕೇಳಿಕೊಂಡಿದ್ದಾರೆ.