ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗ ಸಮುದಾಯದಿಂದ ನಡೆಸಿದ ಬೃಹತ್ ಪ್ರತಿಭಟನೆಯ ಸಮಗ್ರ ಮಾಹಿತಿಯನ್ನು ಪಕ್ಷದ ಹೈಕಮಾಂಡ್ಗೆ ಬಿಜೆಪಿ ರವಾನಿಸಿದೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಬಂಧನ ಘಟನೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒಕ್ಕಲಿಗ ಸಮುದಾಯವನ್ನ ಟಾರ್ಗೆಟ್ ಮಾಡಲಾಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಮೈತ್ರಿ ಸರ್ಕಾರ ಪತನದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಬಂಧನವಾಗಿದ್ದು, ಜನರೂ ಕೂಡ ಇದು ದ್ವೇಷದ ರಾಜಕಾರಣ ಎಂದು ನಂಬುವಂತೆ ಆಗಿದೆ.
ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟಿದ್ದೇ ಡಿಕೆಶಿ ಬಂಧಿಸಲು ಕಾರಣ ಎಂಬ ಸಂದೇಶ ಜನರಿಗೆ ತಲುಪಿದೆ. ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸಬೇಕಿದೆ. ಬಿಜೆಪಿ ಒಕ್ಕಲಿಗ ಸಮುದಾಯದ ವಿರೋಧಿ ಎಂಬಂತೆ ಇಂದಿನ ಪ್ರತಿಭಟನೆ ಇತ್ತು ಎಂದು ಗುಪ್ತವಾಗಿ ಕೆಲವು ಕಾರ್ಯಕರ್ತರನ್ನು ಪ್ರತಿಭಟನೆ ಸ್ಥಳಕ್ಕೆ ಕಳುಹಿಸಿ ಮಾಹಿತಿ ಸಂಗ್ರಹಿಸಿ ಅಲ್ಲಿಂದಲೇ ಹೈಕಮಾಂಡ್ಗೆ ರಾಜ್ಯ ಬಿಜೆಪಿ ಮಾಹಿತಿ ರವಾನಿಸಿದೆ ಎನ್ನಲಾಗಿದೆ.
ಬಿಪಿಯಲ್ಲಿನ ಒಕ್ಕಲಿಗ ಸಮುದಾಯದ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ಕೊಟ್ಟು ಬಿಜೆಪಿ ವಿರುದ್ಧ ಒಕ್ಕಲಿಗ ಸಮುದಾಯ ಮುನಿಸಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಹೈಕಮಾಂಡ್ಗೆ ಮನವಿ ಮಾಡಿದೆ ಎನ್ನಲಾಗಿದೆ.