ಬೆಂಗಳೂರು: ಶುಭಾಶಯ ಹೇಳುವ ನೆಪದಲ್ಲಿ ಹೂಗುಚ್ಛ ನೀಡುವ ಬದಲು ಅನಾಥಾಶ್ರಮಗಳಿಗೆ ಹೋಗಿ ಕೈಯಲ್ಲಾದ ಸಹಾಯ ಮಾಡುವಂತೆ ಕರೆ ನೀಡಿದ್ದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮತ್ತೊಂದು ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ. ಹೊಸ ವರ್ಷದ ದಿನ ಶುಭಾಶಯ ಕೋರಲು ಕಿರಿಯ ಅಧಿಕಾರಿಗಳು ಸುಖಾಸುಮ್ಮನೆ ಹೂಗುಚ್ಛ ತೆಗೆದುಕೊಂಡು ಬರಬೇಡಿ. ಇದರ ಬದಲು ನಿಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಅನಾಥ ಹಾಗೂ ವೃದ್ಧಾಶ್ರಮಗಳಿಗೆ ಹೋಗಿ ಸಹಾಯ ಮಾಡುವಂತೆ ಆಯುಕ್ತರು ಸೂಚಿಸಿ ಪ್ರೇರಣೆಯಾಗಿದ್ದರು. ಅದೇ ರೀತಿ, ಈಗ ತಮ್ಮ ಕಣ್ಣುಗಳನ್ನು ದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ನಾರಾಯಣ ನೇತ್ರಾಲಯದ ಡಾ.ರಾಜ್ ಕುಮಾರ್ ನೇತ್ರದಾನಕ್ಕೆ ದಯಾನಂದ ಅವರು ತಮ್ಮ ಕಣ್ಣು ದಾನ ಮಾಡಿದ್ದಾರೆ. ಈ ಹಿನ್ನೆಲೆ ನಾರಾಯಣ ನೇತ್ರಾಲಯದಿಂದ ಆಯುಕ್ತರಿಗೆ ಪ್ರಶಂಸನಾ ಪತ್ರ ನೀಡಲಾಗಿದೆ. ಜೊತೆಗೆ 'ಹೊಸ ವರ್ಷದ ಶುಭ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ನ ಅಧಿಕಾರಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ' ಎಂದು ಆಯುಕ್ತರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಅನಾಥಾಶ್ರಮಗಳಿಗೆ ಭೇಟಿ : ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗುವ ಇತರೆ ಅಧಿಕಾರಿಗಳು ಹೂಗುಚ್ಛ, ಸಿಹಿ ತಿನಿಸು ಸೇರಿದಂತೆ ಉಡುಗೊರೆಗಳನ್ನು ಕೊಂಡೊಯ್ಯುವುದು ಸಾಮಾನ್ಯ. ಆದರೆ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಈ ಸಲ ಹೀಗೆ ಶುಭಕೋರುವ ಪದ್ಧತಿಗೆ ಬ್ರೇಕ್ ಹಾಕಿದ್ದಾರೆ. ಅನಗತ್ಯ ವಸ್ತುಗಳನ್ನು ತರಲು ವ್ಯಯಿಸುವ ಹಣವನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ವಿನಿಯೋಗಿಸಿದರೆ ಅವರಿಗೆ ನೆರವಾಗಲಿದೆ ಎಂಬ ಸಂದೇಶ ನೀಡಿದ್ದರು.
ಇದನ್ನೂ ಓದಿ : ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ಬಳಿಕ ಹೊಷ ವರ್ಷಾಚರಣೆ ರೂಪುರೇಷೆ ಸಿದ್ಧ: ಬಿ ದಯಾನಂದ್
ಈ ಬೆನ್ನಲ್ಲೇ ನಗರದಲ್ಲಿರುವ ಬುದ್ದಿಮಾಂಧ್ಯ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ ಹೊಸ ವರ್ಷಾಚರಣೆ ಆಚರಿಸಿದ ಆಯುಕ್ತರು, ಮಕ್ಕಳಿಗೆ ಹಣ್ಣು ವಿತರಿಸಿ, ಅವರೊಂದಿಗೆ ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅದರ, ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪೊಲೀಸ್ ಸೇವೆ ದೊರೆಯಲಿದೆ ಎಂದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ : ಹುಸಿ ಬಾಂಬ್ ಬೆದರಿಕೆ ಪ್ರಕರಣ : ಮೇಲ್ನೋಟಕ್ಕೆ ಇದು ಕಿಡಿಗೇಡಿಗಳ ಕೃತ್ಯದಂತಿದೆ.. ಪೊಲೀಸ್ ಕಮೀಷನರ್ ದಯಾನಂದ