ಬೆಂಗಳೂರು : ಆಯುಷ್ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತ 2021 ನೇ ಸಾಲಿನ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು.
ವಿಧೇಯಕ ಮಂಡಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಶಿವಮೊಗ್ಗ ಜಿಲ್ಲೆಯ ಸೋಗನಹಳ್ಳಿಯಲ್ಲಿ ಆಯುಷ್ ವಿಶ್ವ ವಿದ್ಯಾಲಯ ಸ್ಥಾಪನೆಗೆ 100 ಎಕರೆ ಜಮೀನು ಮಂಜೂರಾಗಿದೆ. ಪ್ರಾರಂಭಿಕ ಹಂತದಲ್ಲಿ 20 ಕೋಟಿ ರೂ. ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ಡಾ.ರಂಗನಾಥ್, ಡಾ.ಯತೀಂದ್ರ, ಪ್ರಿಯಾಂಕ್ ಖರ್ಗೆ ಮತ್ತಿತರರು ಈ ವಿಶ್ವವಿದ್ಯಾಲಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ನಂತರ ಶಾಸಕ ರಂಗನಾಥ್ ಮಾತನಾಡಿ, ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವನ್ನು ಸದೃಢ ಮಾಡಲು ಕ್ರಮ ಕೈಗೊಳ್ಳಬೇಕು. ಈ ವಿಶ್ವ ವಿದ್ಯಾಲಯ ಅಗತ್ಯವಿಲ್ಲ ಎಂದರು.
ಇದಕ್ಕೆ ಧ್ವನಿಗೂಡಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ಸದ್ಯ ಆಯುಷ್ ವಿಶ್ವ ವಿದ್ಯಾಲಯ ಅಗತ್ಯವಿಲ್ಲ. ಇದರ ಬದಲಿಗೆ ಬಜೆಟ್‌ನ ಶೇ.4ರಷ್ಟು ಅನುದಾನವನ್ನು ಆರೋಗ್ಯ ಇಲಾಖೆಗೆ ಖರ್ಚು ಮಾಡಬೇಕು ಎಂದು ಆಗ್ರಹಿಸಿದರು. ಮತ್ತೊರ್ವ ಸದಸ್ಯ ಪ್ರಿಯಾಂಕ ಖರ್ಗೆ, ಕೋವಿಡ್‌ನಂಥ ಸಮಯದಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆ ಅಗತ್ಯವಿಲ್ಲ ಎಂದರು. ಮಧ್ಯ ಪ್ರವೇಶಿದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್, ಆಯುಷ್ ವಿಶ್ವ ವಿದ್ಯಾಲಯ ತೆರೆಯುತ್ತಿರುವುದು ಉತ್ತಮ. ಆದರೆ, ಇದನ್ನು ಹಿಂದುಳಿದ ಬೀದರ್‌ನಲ್ಲಿ ಸ್ಥಾಪಿಸಿ ಎಂದು ಸಲಹೆ ನೀಡಿದರು.
ಸ್ಪೀಕರ್ ಸಲಹೆ : ಈ ವೇಳೆ, ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಒಂದೇ ಭಾಗಕ್ಕೆ ಸೀಮಿತವಾಗದೇ ಎಲ್ಲ ಜಿಲ್ಲೆಗಳನ್ನು ಸಮನಾಗಿ ಪರಿಗಣಿಸುವ ಕುರಿತು ಅವಲೋಕಿಸಿ ನಿರ್ಧರಿಸಬೇಕು. ಇದಕ್ಕೊಂದು ಸಮಿತಿ ಇದ್ದರೆ ಸೂಕ್ತ ಸಲಹೆ ನೀಡಿದರು. ಇದಕ್ಕೆ ಶಾಸಕ ಬಂಡೆಪ್ಪ ಕಾಶೆಂಪೂರ್ ಹಾಗೂ ಕೆಲ ಶಾಸಕರು ಸಹ ಸಹಮತ ವ್ಯಕ್ತಪಡಿಸಿದರು. ನಂತರ ಸ್ಪೀಕರ್ ಕಾಗೇರಿ ಅವರು, ವಿಧೇಯಕವನ್ನು ಧ್ವನಿಮತಕ್ಕೆ ಹಾಕಿದರು. ನಂತರ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.
ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ನೆರವಿನ ಉದ್ದೇಶದ ತೆರಿಗೆ ಸುಧಾರಣೆಯ 2021 ನೇ ಸಾಲಿನ ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕವನ್ನು ನಗರಾಭಿವೃದ್ದಿ ಸಚಿವ ಬಿ.ಎ. ಬಸವರಾಜ್ ಮಂಡಿಸಿದರು.
ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಹೆಸರಿಸುವ 2021 ಸಾಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಪರವಾಗಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಂಡಿಸಿದರು.
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಅನುಕೂಲ ಕಲ್ಪಿಸುವ 2021 ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ಎರಡನೆಯ ತಿದ್ದುಪಡಿ) ವಿಧೇಯಕವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಂಡಿಸಿದರು. ಎಲ್ಲ ವಿಧೇಯಕಗಳನ್ನು ಪರ್ಯಾಲೋಚಿಸಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.