ಬೆಂಗಳೂರು: ಕೊರೊನಾ ತಡೆಗಟ್ಟಲು ಅಗತ್ಯ ಸೇವೆ ಹೊರೆತುಪಡಿಸಿ ಉಳಿದ ಎಲ್ಲ ಸೇವೆ ಬಂದ್ ಮಾಡಲಾಗಿದೆ. ಇಂತ ಕಠಿಣ ಪರಿಸ್ಥಿತಿಯಲ್ಲಿ ಅಗತ್ಯ ಸೇವೆಯಲ್ಲಿರುವವರ ವಿರುದ್ಧ ಮನೆ ಮಾಲೀಕರು ಮನೆಗೆ ಬಾರದಿರಲು ನಿಷೇಧಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ವೈದ್ಯರು, ನರ್ಸ್ ಗಳು ಹಾಗೂ ವೈದ್ಯಕೀಯ ಸಹಾಯಕರಿಗೆ ಈಗಾಗಲೇ ಮನೆ ಮಾಲೀಕರು ಮನೆಗೆ ಬರಬೇಡಿ ಅಥವಾ ಮನೆ ಖಾಲಿ ಮಾಡಿ ಎಂದು ಕಿರುಕುಳ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಸರ್ಕಾರ ನಗರ ಪಾಲಿಕೆಗಳಿಗೆ ಹಾಗೂ ಪೊಲೀಸರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಜೊತೆಗೆ ಪ್ರತಿನಿತ್ಯ ಕ್ರಮ ಕೈಗೊಂಡಿದರ ಬಗ್ಗೆ ಪೊಲೀಸ್ ಇಲಾಖೆ, ನಗರ ಪಾಲಿಕೆ, ಪುರಸಭೆಗಳು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ.
ಇನ್ನು ನಿನ್ನೆ ಸಚಿವ ಆರ್. ಅಶೋಕ್ ಮಾತನಾಡಿ, ಮನೆಯ ಮಾಲೀಕರು ಅಗತ್ಯ ಸೇವೆಯಲ್ಲಿರುವವರಿಗೆ ತೊಂದರೆ ಕೊಡುತ್ತಿದ್ದಾರೆ ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದರು.