ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಬರೋಬ್ಬರಿ 2.5 ಲಕ್ಷಕ್ಕೆ ಏರಿದ್ದು, ಇದು ರಾಜ್ಯದಲ್ಲಿನ ಕೋವಿಡ್ ತಪಾಸಣೆ ಪ್ರಕ್ರಿಯೆಯ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ.
ರಾಜ್ಯದಲ್ಲಿ ಇದುವರೆಗೆ 35 ಲಕ್ಷಕ್ಕೂ ಅಧಿಕ ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ದಿನದಿಂದ ದಿನಕ್ಕೆ ತಪಾಸಣೆ ಪ್ರಮಾಣ ಹೆಚ್ಚಳ ಮಾಡಲಾಗುತ್ತದೆ. ಇಂದು ಸಿಎಂ ಬಿ. ಎಸ್. ಯಡಿಯೂರಪ್ಪ ಕೂಡ ತಪಾಸಣೆ ಪ್ರಮಾಣ ಹೆಚ್ಚಳ ಮಾಡುವಂತೆ ಸೂಚಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಇತರ ಸರ್ಕಾರಿ ವೈದ್ಯಕೀಯ ಸೌಲಭ್ಯಗಳಲ್ಲಿನ ಕೋವಿಡ್ ಪರೀಕ್ಷೆಗಳನ್ನು ನಿಧಾನಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರನ್ನು ವಿಚಾರಿಸಿರುವ ಸಿಎಂ, ಎಲ್ಲೆಡೆ ತಪಾಸಣೆ ಪ್ರಮಾಣ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವು ದೇಶದಲ್ಲಿ ಹೆಚ್ಚಾಗುತ್ತಲೇ ಇದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ದೇಶದಲ್ಲಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 45 ಲಕ್ಷ ತಲುಪಲಿದ್ದು, ರಾಜ್ಯದಲ್ಲಿನ ಸೋಂಕಿತರ ಸಂಖ್ಯೆ 4.25 ಲಕ್ಷ ಮೀರಿದೆ. ಮಾರಕ ರೋಗ ವಿನಾಶಕಾರಿಯಾಗಿ ಮುಂದುವರಿದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸರಾಸರಿ 2.5 ರಿಂದ 3 ಸಾವಿರದಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಸ್ಥಿರವಾಗಿ ಪ್ರಕರಣಗಳು ಏರಿಕೆ ಕಾಣುತ್ತಲೇ ಇದ್ದು, ಕಳೆದ ಒಂದು ತಿಂಗಳಲ್ಲಿ ದಾಖಲಾದ ಪ್ರಕರಣಗಳು ದುಪ್ಪಟ್ಟು ಎನ್ನುವುದು ಗಮನಾರ್ಹ ಸಂಗತಿ.
ರಾಜ್ಯದಲ್ಲಿ ಸದ್ಯ ಆರ್ಟಿ ಹಾಗೂ ಆರ್ಟಿಪಿಸಿಆರ್ ಈ ಎರಡೂ ರೀತಿಯ ಪರೀಕ್ಷೆ ಮಾಡಲಾಗುತ್ತಿದ್ದು, ನಿತ್ಯ 25 ಸಾವಿರಕ್ಕೂ ಅಧಿಕ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿ ವಾರ್ಡ್ ನ ಒಂದೊಂದು ಕಡೆ ವಿಶೇಷ ಕೇಂದ್ರ ತೆರೆದು ಸಾಮೂಹಿಕ ತಪಾಸಣೆ ನಡೆಸುವ ಕಾರ್ಯ ಕೂಡ ನಿರಂತರವಾಗಿ ಬಿಬಿಎಂಪಿಯಿಂದ ಆಗುತ್ತಿದೆ. ಕೋವಿಡ್ ಚಿಕಿತ್ಸೆ ಮತ್ತು ಪರೀಕ್ಷೆಗಳ ಮೇಲೆ ಸರ್ಕಾರದ ಏಕಸ್ವಾಮ್ಯ ಮುಂದುವರೆದಿದ್ದು, ನಿರಂತರವಾಗಿ ನಿಗಾ ವಹಿಸುವ ಕಾರ್ಯ ಆಗುತ್ತಿದೆ.
ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗಿದ್ದು, ಮಾ.8 ರಂದು. ನಂತರ 108 ದಿನಗಳಲ್ಲಿ ಇದು 1 ಲಕ್ಷಕ್ಕೆ ಏರಿತು. ಇದಾದ 20 ದಿನದಲ್ಲಿ ಇನ್ನೊಂದು ಲಕ್ಷ ಸೇರ್ಪಡೆಯಾಯಿತು. ಆ.26 ರವೇಳೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಿದ್ದರೆ, ಇದೀಗ 4.3 ಲಕ್ಷಕ್ಕೆ ಬಂದು ನಿಂತಿದೆ. ಸದ್ಯ ಪ್ರತಿದಿನ ಸರಾಸರಿ 8 ರಿಂದ 9 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ತಪಾಸಣೆಗೆ ಒಳಗಾಗುವವರಲ್ಲಿ ಸೋಂಕು ದೃಢಗೊಳ್ಳುವ ಪ್ರಮಾಣ ಶೇ.11.87ರಷ್ಟಿದ್ದು, ಸೋಂಕಿತರ ಹೆಚ್ಚಳದಲ್ಲಿ ರಾಜ್ಯ ದೇಶದಲ್ಲೇ ಮೂರನೇ ಹಾಗೂ ಗುಣಮುಖರಾಗುವವರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 6900 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅಧಿಕ ಮರಣ ಪ್ರಕರಣದಲ್ಲಿ ಮೂರನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಯಾವುದೇ ಕೊರತೆ ಇಲ್ಲ:
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾತನಾಡಿದ್ದು, ರಾಜ್ಯದಲ್ಲಿ ವೈದ್ಯರು, ನರ್ಸ್ಗಳು, ಪರೀಕ್ಷಾ ಕೇಂದ್ರದ ಸೌಲಭ್ಯ, ಕಿಟ್ ಗಳು ಸೇರಿದಂತೆ ಯಾವುದೇ ಸೌಲಭ್ಯದ ಕೊರತೆ ಇಲ್ಲ. ಅಲ್ಲದೇ ರೋಗಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ತಪಾಸಣೆ ಕಡಿಮೆ ಮಾಡುವ ಕಾರ್ಯ ಆಗುತ್ತಿಲ್ಲ. ದಿನದಿಂದ ದಿನಕ್ಕೆ ತಪಾಸಣೆ ಪ್ರಮಾಣ, ಕೇಂದ್ರಗಳು ಹೆಚ್ಚಾಗುತ್ತಲೇ ಇವೆ. ನಾವು ಕೊರೊನಾವನ್ನು ನಿರ್ಲಕ್ಷ್ಯ ಮಾಡಿಲ್ಲ. ಇಲ್ಲಿ ರೋಗ ಪ್ರಸರಣ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕೆ ಅಗತ್ಯ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅದರ ಹೊರತು, ತಪಾಸಣೆ ಕಡಿಮೆ ಮಾಡಿ, ಸೌಲಭ್ಯ ಕಡಿಮೆ ಮಾಡಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ತೋರಿಸುವ ಯತ್ನ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.