ಬೆಂಗಳೂರು: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಸುಲೇಮಾನ್ ಬಂಧಿತ ಆರೋಪಿ. ಲಾಕ್ಡೌನ್ ವೇಳೆ ಕಾಡುಗೋಡಿ ಠಾಣಾ ವ್ಯಾಪ್ತಿಯ ಉದ್ಯಮಿ ಶ್ರೀನಿವಾಸ್ ರೆಡ್ಡಿ ಎಂಬುವವರ ಮನೆಯಲ್ಲಿ ಯಾರೋ ಕಳ್ಳರು ರಾತ್ರಿ ವೇಳೆ ಬೀಗ ಹಾಕಿದ್ದ ಮನೆಯ ಡೋರ್ ಲಾಕ್ ಒಡೆದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಸುಮಾರು 355 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವಹಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿಯ ಸಂಘಟಿತ ಅಪರಾಧ ದಳದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 521 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಉಪ್ಪಾರಪೇಟೆ, ಮಲ್ಲೇಶ್ವರಂ, ಜಯನಗರ, ಸಂಪಿಗೆಹಳ್ಳಿ ಮತ್ತು ಬಿಡದಿ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ದರೋಡೆ, ದರೋಡೆ ಯತ್ನದ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗೆ ಸಿಸಿಬಿ ತನ್ನ ವಶಕ್ಕೆ ಪಡೆದುಕೊಂಡಿದೆ.