ಬೆಂಗಳೂರು : ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸರ್ಜನೆಯಾಗಿರುವ ಹಿನ್ನೆಲೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಆಪ್ತ ಶಾಖೆಯಲ್ಲಿ ಸ್ಥಳ ನಿಯೋಜನೆ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರು ಆಗಸ್ಟ್ 2ರೊಳಗಾಗಿ ಬಿಡುಗಡೆಯಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜುಲೈ 26 ರಂದು ಬಿ ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದಾರೆ. ಇದರಿಂದ ಸಚಿವ ಸಂಪುಟ ವಿಸರ್ಜನೆಗೊಂಡಿದೆ. ಹೀಗಾಗಿ, ಹಿಂದಿನ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳ ಆಪ್ತ ಶಾಖೆಗಳಲ್ಲಿ ಸ್ಥಳ ನಿಯುಕ್ತಿ, ನಿಯೋಜನೆ, ಒಪ್ಪಂದ ಹಾಗೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರುಗಳನ್ನು ಬಿಡುಗಡೆಗೊಳಿಸಲಾಗಿದೆ.
ಹೀಗಾಗಿ, ಆಗಸ್ಟ್ 2ರ ಮಧ್ಯಾಹ್ನದೊಳಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳಿಂದ ಸಂಬಂಧಪಟ್ಟವರು ಬಿಡುಗಡೆಯಾಗಬೇಕು. ಸ್ಥಳ ನಿಯುಕ್ತಿಗೊಂಡಿದ್ದವರು ತಮ್ಮ ಮಾತೃ ಇಲಾಖೆ, ನಿಗಮ, ಮಂಡಳಿಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ : ಸರ್ಕಾರದಿಂದ ಹೊಸ ಆದೇಶ: ಕೇರಳ- ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RT-PCR ಕಡ್ಡಾಯ
ಎಲ್ಲಾ ಕಡತಗಳನ್ನು ಇಲಾಖೆಯ ಕಾರ್ಯದರ್ಶಿಗಳಿಗೆ ಹಿಂದಿರುಗಿಸಬೇಕು. ಕಚೇರಿ ಉಪಯೋಗಗಕ್ಕಾಗಿ ಒದಗಿಸಿದ್ದ ಲೇಖನಿ, ಸಾಮಗ್ರಿ, ಗಣಕಯಂತ್ರ, ಪೀಠೋಪಕರಣ ದೂರವಾಣಿಯನ್ನು ವಾಪಸು ನೀಡಿ ಸೀಕೃತಿ ಪಡೆಯಬೇಕು. ಗುರುತಿನ ಚೀಟಿ, ವಾಹನ ಪಾಸ್ ಇತ್ಯಾದಿಗಳನ್ನು ಹಿಂದಿರುಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶದಲ್ಲಿ ತಿಳಿಸಿದೆ.